ಸಂಡೂರು: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ೧೯೩೪ರಲ್ಲಿ ಸಂಡೂರಿಗೆ ಆಗಮಿಸಿದ್ದ ಮಹಾತ್ಮ ಗಾಂಧೀಜಿಯವರು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮಾರು ಹೋಗಿ ಸಂಡೂರನ್ನು ಓಯಸಿಸ್ ಎಂದು ಬಣ್ಣಿಸಿದ ವಿಷಯ ಈ ಭಾಗದಲ್ಲಿ ಜನಜನಿತವಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಂಡೂರು ಸಂಸ್ಥಾನವನ್ನು ಆಳುತ್ತಿದ್ದ ಘೋರ್ಪಡೆ ರಾಜ ವಂಶಸ್ಥರು ಇಲ್ಲಿನ ದೇವಾಲಯಗಳ ಪ್ರವೇಶಕ್ಕೆ ಹರಿಜನರಿಗೆ ಮುಕ್ತ ಅವಕಾಶ ಕಲ್ಪಿಸಿದ್ದನ್ನು ತಿಳಿದ ಮಹಾತ್ಮ ಗಾಂಧೀಜಿಯವರು, ‘ದಕ್ಷಿಣ ಭಾರತದ ಒಂದು ಪುಟ್ಟ ಸಂಸ್ಥಾನ ಹರಿಜನರಿಗೆ ದೇವಸ್ಥಾನಗಳಲ್ಲಿ ಮುಕ್ತ ಪ್ರವೇಶ ನೀಡಿತು; ಆಕಾಶವೇನೂ ಕಳಚಿ ಬೀಳಲಿಲ್ಲ’ ಎಂದು ಬಣ್ಣಿಸಿದ್ದರು.ಗಾಂಧೀಜಿಯವರ ಸಂಡೂರು ಭೇಟಿಯನ್ನು ಸ್ಮರಣೀಯವಾಗಿಸಲು ಮಾಜಿ ಹಣಕಾಸು ಸಚಿವರಾದ ದಿವಂಗತ ಎಂ.ವೈ. ಘೋರ್ಪಡೆಯವರು ೧೯೯೫ರಲ್ಲಿ ಮಹಾತ್ಮ ಗಾಂಧೀಜಿಯವರ ೧೨೫ನೇ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಆದರ್ಶ ಸಮುದಾಯ ಕೇಂದ್ರದ ಆವರಣದಲ್ಲಿ ಗಾಂಧೀಜಿಯವರ ಪ್ರತಿಮೆ ಪ್ರತಿಷ್ಠಾಪಿಸಿದರು. ಈ ಪ್ರತಿಮೆಯನ್ನು ಅಂದಿನ ರಾಜ್ಯದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ೧೯೯೫ರ ಅಕ್ಟೋಬರ್ ೧೧ರಂದು ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದ್ದರು.
ಇತ್ತೀಚೆಗೆ ಸಂಡೂರು ಬಳಿಯ ಧರ್ಮಾಪುರದ ಹತ್ತಿರದ ಪ್ರಕೃತಿ ವೀಕ್ಷಣಾ ಗೋಪುರದ ಬಳಿಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದೀಗ ಜನಾಕರ್ಷಣೀಯ ತಾಣವಾಗುತ್ತಿದೆ.
ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಡೂರಿಗೆ ಆಗಮಿಸಿ, ಇಲ್ಲಿನ ವಿಠಲ ದೇವಸ್ಥಾನದ ಹತ್ತಿರದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು. ಸಂಡೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದರು ಎಂಬ ವಿಷಯ ಹೊಸ ತಲೆಮಾರಿನವರಲ್ಲಿ ರೋಮಾಂಚನವನ್ನುಂಟು ಮಾಡುತ್ತಿದೆ. ಅಲ್ಲದೆ, ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡುತ್ತಿದೆ.ಸಂಡೂರಿನ ಆದರ್ಶ ಸಮುದಾಯ ಕೇಂದ್ರದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆ.