ಜಗತ್ತಿನ ಮಹಾನ್ ಅಹಿಂಸಾವಾದಿ ಮಹಾತ್ಮಾ ಗಾಂಧಿ

KannadaprabhaNewsNetwork |  
Published : Oct 03, 2025, 01:07 AM IST
ಸಿಕೆಬಿ-3 ಗಾಂಧೀ ಭವನವದಲ್ಲಿ ನಡೆದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು  ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್  ಉಧ್ಘಾಟಿಸಿದರು   | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಅಹಿಂಸೆಯನ್ನು ತನ್ನ ಜೀವನದ ವಿಧಾನವನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾ ನಾಯಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜನ್ಮದಿನವಾದ ಅಕ್ಟೋಬರ್ 2 ನ್ನು ಇಂದು ಇಡೀ ಜಗತ್ತಿನಾದ್ಯಂತ ‘ವಿಶ್ವ ಅಹಿಂಸಾ ದಿನ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆ ನೀಡಿರುವುದು ಹೆಮ್ಮೆಯ ವಿಚಾರ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆಯಲು ಹೆಚ್ಚಿನ ಪ್ರಾಣ ಹಾನಿ ಆಗುವುದನ್ನು ಮನಗಂಡು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾನ್ ಅಹಿಂಸಾ ನಾಯಕ

ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಅಹಿಂಸೆಯನ್ನು ತನ್ನ ಜೀವನದ ವಿಧಾನವನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾ ನಾಯಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜನ್ಮದಿನವಾದ ಅಕ್ಟೋಬರ್ 2 ನ್ನು ಇಂದು ಇಡೀ ಜಗತ್ತಿನಾದ್ಯಂತ ‘ವಿಶ್ವ ಅಹಿಂಸಾ ದಿನ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆ ನೀಡಿರುವುದು ಭಾರತೀಯೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ ಎಂದರು.

ಗಾಂಧಿ, ಶಾಸ್ತ್ರೀ ಸ್ಮರಣೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ, ರಾಷ್ಟ್ರದ ಇತಿಹಾಸದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ಧೂರ್‌ ಶಾಸ್ತ್ರಿ ಅಳಿಸಲಾಗದ ಛಾಪು ಮೂಡಿಸಿದ ನಾಯಕರು. ಈ ಶುಭ ದಿನದಂದು, ಉಜ್ವಲ ಭವಿಷ್ಯದತ್ತ ನಮ್ಮನ್ನು ಪ್ರೇರೇಪಿಸುತ್ತಿರುವ ಅವರ ಶಾಶ್ವತ ಪರಂಪರೆಗೆ ನಾವು ಗೌರವ ಸಲ್ಲಿಸುತ್ತೇವೆ. ಅಕ್ಟೋಬರ್ 2, ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ, ಇದು ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟವನ್ನು ಮುನ್ನಡೆಸಿದ ವ್ಯಕ್ತಿಯನ್ನು ಗೌರವಿಸುವ ದಿನವಾಗಿದೆ ಎಂದರು.

ಗಾಂಧಿಯವರ ಸತ್ಯ, ಅಹಿಂಸೆ ಮತ್ತು ನಾಗರಿಕ ಅಸಹಕಾರದ ತತ್ವಶಾಸ್ತ್ರವು ಮುಕ್ತ ಮತ್ತು ನ್ಯಾಯಯುತ ಭಾರತಕ್ಕೆ ಅಡಿಪಾಯ ಹಾಕಿತು. ನ್ಯಾಯ, ಸಮಾನತೆ ಮತ್ತು ಶಾಂತಿಗಾಗಿ ಅವರ ಅಚಲ ಬದ್ಧತೆಯು ನಮ್ಮೆಲ್ಲರಿಗೂ ಮಾರ್ಗದರ್ಶಕ ಬೆಳಕಾಗಿ ಕಾರ್ಯನಿರ್ವಹಿಸುತ್ತದೆ. ಗಾಂಧಿ ಜಯಂತಿಯನ್ನು ಸ್ಮರಿಸುತ್ತಿರುವ ಈ ಸಂದರ್ಭದಲ್ಲಿ, ಸರಳತೆ, ಸ್ವಾವಲಂಬನೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಮಹತ್ವದ ಕುರಿತು ಅವರ ಬೋಧನೆಗಳನ್ನು ನೆನಪಿಸಿಕೊಳ್ಳೋಣ ಎಂದರು.

ಜೈ ಜವಾನ್, ಜೈ ಕಿಸಾನ್

ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ವಾರ್ಷಿಕೋತ್ಸವವನ್ನು ಸಹ ಆಚರಿಸುತ್ತೇವೆ. ಶಾಸ್ತ್ರಿಜಿ ಅವರು ಸರಳತೆ, ಸಮಗ್ರತೆ ಮತ್ತು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಸಮರ್ಪಣೆಗೆ ಹೆಸರುವಾಸಿಯಾದ ವಿನಮ್ರ ನಾಯಕರಾಗಿದ್ದರು. ಸವಾಲಿನ ಸಮಯದಲ್ಲಿ ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿ ನೀಡಲು ಅವರು ಜೈ ಜವಾನ್, ಜೈ ಕಿಸಾನ್ (ಸೈನಿಕನಿಗೆ ಜಯವಾಗಲಿ, ರೈತನಿಗೆ ಜಯವಾಗಲಿ) ಎಂಬ ಘೋಷಣೆಯನ್ನು ರೂಪಿಸಿದರು. 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಾಯಕತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಬದ್ಧತೆ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಅವರ ಪರಂಪರೆ ನಮಗೆ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮಹತ್ವವನ್ನು ನೆನಪಿಸುತ್ತದೆ ಎಂದು ಹೇಳಿದರು.

ಬಹುಮಾನ ವಿತರಣೆ

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಪೌರಾಯುಕ್ತ ಮನ್ಸೂರ್ ಆಲಿ, ತಹಶೀಲ್ದಾರ್ ರಶ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್, ಶಾಲಾ ಶಿಕ್ಷಕರು.ವಿದ್ಯಾರ್ಥಿಗಳು, ಮತ್ತಿತರರು ಇದ್ದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ