ಕನ್ನಡಪ್ರಭ ವಾರ್ತೆ ಮಣಿಪಾಲ
ಈ ಸಂದರ್ಭ ಮಾಹೆಯ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಅವರು ಮಾಹೆಯ ನೂತನ ವಿಶನ್ (ದೃಷ್ಟಿಕೋನ) ಮತ್ತು ಮಿಶನ್ (ಧ್ಯೇಯ)ಗಳನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಎಂಬಿಬಿಎಸ್ ಪದವೀಧರೆ ಕುಮಾರಿ ಪ್ರಿಯಾಂಶಿ ರಾಸ್ತೋಗಿ ಮತ್ತು ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಬಿಟೆಕ್ ಪದವೀಧರೆ ಕುಮಾರಿ ಕೋಮಲ್ ಮಾಥುರ್ ಅವರಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ಆರಂಭದಲ್ಲಿ ಪದವೀಧರರ ಜೊತೆಗೆ ಮಾಹೆಯ ವರಿಷ್ಠರ ಭವ್ಯ ಮೆರವಣಿಗೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಮಾಹೆಯ ವಿಜ್ಞಾನ - ತಂತ್ರಜ್ಞಾನ ಸಹಕುಲಪತಿ ಡಾ. ಕರುಣಾಕರ ಕೋಟೆಗಾರ್ ಸ್ವಾಗತಿಸಿದರು, ಎಂಐಟಿಯ ನಿರ್ದೇಶಕಿ ಡಾ.ಚಂದ್ರಕಲಾ ಸಿ. ಬಿ. ಅತಿಥಿಗಳನ್ನು ಪರಿಚಿಸಿದರು, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ. ಪೂರ್ಣಿಮಾ ಕುಂದಾಪುರ್ ಮತ್ತು ಸೆಂಟರ್ ಫಾರ್ ಡಾಕ್ಟೋರಲ್ ಸ್ಟಡೀಸ್‌ನ ಉಪನಿರ್ದೇಶಕಿ ಡಾ. ವಸುಧಾದೇವಿ ಪದವೀಧರರ ಹೆಸರಗಳನ್ನು ವಾಚಿಸಿದರು. ಕುಲಸಚಿವ ಡಾ. ಪಿ. ಗಿರಿಧರ ಕಿಣಿ ವಂದಿಸಿದರು. ವೇದಿಕೆಯಲ್ಲಿ ಮಾಹೆಯ ವಿವಿಧ ಶೈಕ್ಷಣಿಕ ವಿಭಾಗಗಳ ಸಹಕುಲಪತಿಗಳು, ನಿರ್ದೇಶಕರು ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಕೋನೆ ಎಲಿವೇಟರ್ಸ್ ಸಂಸ್ಥೆಯ ದಕ್ಷಿಣ ಏಷ್ಯಾದ ಅಧ್ಯಕ್ಷ ಅಮಿತ್ ಗೊಸೈನ್ ಘಟಿಕೋತ್ಸವ ಭಾಷಣ ಮಾಡುತ್ತಾ, "ಮಣಿಪಾಲ ಕೇವಲ ಪದವಿ ಪಡೆಯುವ ಸ್ಥಳವಷ್ಟೇ ಅಲ್ಲ, ಇಲ್ಲಿ ಮೌಲ್ಯಗಳು ರೂಪುಗೊಳ್ಳುತ್ತವೆ ಎಂದರು. ತಂತ್ರಜ್ಞಾನ ವಿಕಾಸಗೊಳ್ಳುತ್ತಲೇ ಇರುತ್ತದೆ, ಆದರೆ ಮಾನವೀಯ ಮೌಲ್ಯಗಳು ಮತ್ತು ಮೌಲ್ಯಯುತ ಸಂಬಂಧಗಳು ಎಂದಿಗೂ ಶಾಶ್ವತ. ನಿಜವಾದ ಯಶಸ್ಸು ನಮ್ಮ ವೈಯಕ್ತಿಕ ಸಾಧನೆಗಳಲ್ಲಿ ಮಾತ್ರವಲ್ಲ, ಇತರರ ಜೀವನದಲ್ಲಿ ನಾವು ಮೂಡಿಸುವ ಪ್ರಭಾವದಲ್ಲೂ ಅಡಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡುವುದಕ್ಕೆ ಸೀಮಿತವಾಗದೆ, ಅದಕ್ಕೂ ಮೀರಿದ ಜವಾಬ್ದಾರಿ ಹೊರಬೇಕು ಎಂಬುದನ್ನು ನಮ್ಮ ನೂತನ ಧ್ಯೇಯೋದ್ದೇಶ ಪ್ರತಿಪಾದಿಸುತ್ತದೆ ಎಂದರು.