ಮಹೇಶ ಜೋಶಿ ದುರಾಡಳಿತ ಮಿತಿಮೀರಿದ್ದು, ಕಸಾಪಕ್ಕೆ ಆಡಳಿತಾಧಿಕಾರಿ ನೇಮಿಸಲು ಒತ್ತಾಯ

KannadaprabhaNewsNetwork |  
Published : Jun 21, 2025, 12:49 AM IST
ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಸುಂಧರಾ ಭೂಪತಿ ಮತ್ತಿತರರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಸರ್ವಾಧಿಕಾರ ಧೋರಣೆ ಕುರಿತು ವಿವರಿಸಿದರು.  | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಅವರ ಆರ್ಥಿಕ ದುರಾಡಳಿತ ಮಿತಿಮೀರಿದ್ದು, ಕೂಡಲೇ ಪರಿಷತ್ಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಡಾ. ವಸುಂಧರಾ ಭೂಪತಿ ಹಾಗೂ ಜಾಣಗೆರೆ ವೆಂಕಟರಾಮಯ್ಯ ಆಗ್ರಹಿಸಿದ್ದಾರೆ.

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಅವರ ಆರ್ಥಿಕ ದುರಾಡಳಿತ ಮಿತಿಮೀರಿದ್ದು, ಕೂಡಲೇ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಹಿರಿಯ ಸಾಹಿತಿಗಳಾದ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ, ಡಾ. ವಸುಂಧರಾ ಭೂಪತಿ ಹಾಗೂ ಜಾಣಗೆರೆ ವೆಂಕಟರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಹಾವೇರಿ ಸಮ್ಮೇಳನ ಹಾಗೂ ಮಂಡ್ಯ ಸಮ್ಮೇಳನದ ಲೆಕ್ಕಪತ್ರ ಇನ್ನೂ ನೀಡಿಲ್ಲ. ಜೋಶಿ ಅವರಿಗೆ ಆರ್ಥಿಕ ಶಿಸ್ತು ಇಲ್ಲ. ಹಣ ದುರುಪಯೋಗದ ಬಗ್ಗೆ ಉತ್ತರ ನೀಡುತ್ತಿಲ್ಲ. ಮಂಡ್ಯ ಸಮ್ಮೇಳನದಲ್ಲಿ ₹2.50 ಕೋಟಿ ತೆಗೆದುಕೊಂಡಿದ್ದರ ಬಗ್ಗೆ ಇನ್ನೂ ಲೆಕ್ಕನೀಡಿಲ್ಲ. ತನ್ನ ಮನಸ್ಸಿಗೆ ಬಂದಂತೆ ಹಣ ಬಳಕೆ ಮಾಡಿದ್ದಾರೆ. ತನ್ನ ಮಾತು ಕೇಳುವವರಿಗೆ ಮಾತ್ರ ಜಿಲ್ಲಾ ಸಮ್ಮೇಳನಕ್ಕೆ ಹಣ ನೀಡಿದ್ದಾರೆ. ಉಳಿದವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಜೋಶಿ ಅವರು ಅಧ್ಯಕ್ಷರಾದ ಬಳಿಕ ರಾಜ್ಯಮಟ್ಟದ ಯಾವುದೇ ಕಾರ್ಯಕ್ರಮ ಸಂಘಟಿಸಲಿಲ್ಲ. ಸಾಹಿತ್ಯ ಪರಿಷತ್ ಅಧಿಕಾರ ನಡೆಸಲು ಅಲ್ಲ; ಸೇವೆ ಮಾಡಲು ಇರುವ ಸಂಸ್ಥೆ ಎಂಬುದನ್ನು ಮರೆತು ಅಧಿಕಾರಿಯುತವಾಗಿ ವರ್ತಿಸುತ್ತಿದ್ದಾರೆ. ಅವರ ವರ್ತನೆ ಸಾಕಷ್ಟು ಜನರು ಬೇಸತ್ತು ಹೋಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿದ್ದು, ಪರಿಷತ್ತಿನ ಆಶಯಗಳ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಮಾತು-ಕೃತಿಯಲ್ಲಿ ಸಾಹಿತ್ಯದ ಸೂಕ್ಷ್ಮತೆಯಿಲ್ಲ. ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳುತ್ತಿಲ್ಲ. ಈತ ಪರಿಷತ್ತಿನ ಅಧ್ಯಕ್ಷರಾದ ಬಳಿಕ ಪರಿಷತ್ತಿನಲ್ಲಿ ಸಾಂಸ್ಕೃತಿಕ ವಾತಾವರಣವೇ ಕೆಟ್ಟು ಹೋಗಿದೆ. ಸಾಹಿತ್ಯ ಸೂಕ್ಷ್ಮತೆ ಹೊಂದಿರದ ವ್ಯಕ್ತಿ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಹೀಗಾಗಿ ಜೋಶಿ ಅವರ ಅವಧಿಯಲ್ಲಾಗಿರುವ ದುರಾಡಳಿತ ಹಾಗೂ ಹಣ ದುರ್ಬಳಕೆ ಬಗ್ಗೆ ಸೂಕ್ತ ತನಿಖೆಯಾಗಬೇಕು. ಹೀಗಾಗಿ ಕೂಡಲೇ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ತನಿಖೆಯ ವರದಿ ಬಂದ ಬಳಿಕ ಜೋಶಿ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಅಧ್ಯಕ್ಷ ಸ್ಥಾನ ಮುಂದುವರಿಯಲಿ. ಇಲ್ಲದಿದ್ದರೆ ಚುನಾವಣೆ ಮುಗಿಯುವವರೆಗೆ ಆಡಳಿತ ಅಧಿಕಾರಿಯನ್ನು ಮುಂದುವರಿಸಬೇಕು ಎಂಬುದು ನಮ್ಮ ಆಗ್ರಹವಾಗಿದ್ದು, ಈ ಸಂಬಂಧ ನ್ಯಾಯಾಂಗ ಮೊರೆ ಹೋಗುತ್ತಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಕುರಿತು ಮನವಿ ಮಾಡಿ, ಮುಂದಿನ ಕ್ರಮಕ್ಕೆ ಕೋರಿದ್ದೇವೆ. ಪರಿಷತ್ತಿನಲ್ಲಿ ಜೋಶಿ ಅವರ ದುರಾಡಳಿತ ಹಾಗೂ ದುರ್ಬಳಕೆ ಕುರಿತು ಸಹಕಾರ ಇಲಾಖೆಗೆ ದಾಖಲೆಗಳನ್ನು ನೀಡಿ ತನಿಖೆಗೆ ಒತ್ತಾಯಿಸಿದ್ದೇವೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗಳು ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮುಂದುವರಿಯಲು ಬಿಡುವುದಿಲ್ಲ. ಅವರ ನಡವಳಿಕೆ ಹಾಗೂ ಆರ್ಥಿಕ ಅಶಿಸ್ತು ಕುರಿತು ರಾಜ್ಯದ ಜನರಿಗೆ ತಿಳಿಸುತ್ತೇವೆ. ನ್ಯಾಯಾಂಗ ಮೊರೆ ಹೋಗುವ ಮೂಲಕ ಪರಿಷತ್ ಉಳಿಸುತ್ತೇವೆ ಎಂದು ಹೇಳಿದರು.

ಸಮ್ಮೇಳನಗಳು ಸಾಂಸ್ಕೃತಿಕ, ಕಲೆ ಸಾಹಿತ್ಯದ ವೇದಿಕೆಯಾಗಬೇಕು. ಆದರೆ, ರಾಜಕೀಯ ಪಕ್ಷಗಳ ವೇದಿಕೆಯಾಗಬಾರದು. ಬಳ್ಳಾರಿಯಲ್ಲಿ 88ನೇ ಸಾಹಿತ್ಯ ಸಮ್ಮೇಳನ ನಡೆಯುವುದು ಸ್ವಾಗತಾರ್ಹವಾಗಿದೆ. ಆದರೆ, ದುಂದುವೆಚ್ಚಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ ಮಾತನಾಡಿ, ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಸಮ್ಮೇಳನಗಳು ದುಬಾರಿಯಾಗಿದ್ದು, ಊಟ, ತಿಂಡಿ, ಜಾತ್ರೆಗೆ ಸೀಮಿತವಾಗಿದೆ. ಬಳ್ಳಾರಿಯಲ್ಲಿ ಜರುಗುವ ಸಮ್ಮೇಳನ ಅರ್ಥಪೂರ್ಣವಾಗಲಿ. ವಿನಾಕಾರಣದ ದುಂದುವೆಚ್ಚಗಳಿಗೆ ಕಡಿವಾಣ ಬೀಳುವಂತಾಗಲಿ ಎಂದು ಆಶಿಸಿದರು.

ಮಂಡ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಮಂಡ್ಯ ಸಾಹಿತ್ಯ ಸಮ್ಮೇಳನದ ವೇಳೆ ಮಹೇಶ ಜೋಶಿ ಅವರಿಂದಾಗಿರುವ ಅಪಮಾನ ಕುರಿತು ವಿವರಿಸಿದರು.

ರೈತ ಮಹಿಳಾ ಸಂಘಟನೆಯ ಸುನಂದಾ ಜಯರಾಂ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ