ಬಾಲ್ಯ ವಿವಾಹದಿಂದ ಮಕ್ಕಳ ಮಾನಸಿಕ ಆರೋಗ್ಯ ಏರುಪೇರು

KannadaprabhaNewsNetwork |  
Published : Jun 21, 2025, 12:49 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿ ಗ್ರಾಮದಲ್ಲಿ ಬಾಲ್ಯ ವಿವಾಹ ನಿಷೇಧ ಮತ್ತು ಫೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಸೂರಗೊಂಡನಹಳ್ಳಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ್ಯ ವಿವಾಹ ನಿಷೇಧ ಮತ್ತು ಫೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಗೋಪಾಲಪ್ಪ ಮಾತನಾಡಿ, ಬಾಲ್ಯ ವಿವಾಹದಿಂದ ಮಕ್ಕಳ ಶಿಕ್ಷಣ ಕುಂಠಿತವಾಗುವ ಜತೆಗೆ ಮಕ್ಕಳ ಮಾನಸಿಕ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ.

ಎಳೆ ಮನಸು ಮತ್ತು ದೇಹದ ಮೇಲೆ ಬಾಲ್ಯ ವಿವಾಹ ಬರೆ ಎಳೆದಂತಾಗುತ್ತದೆ. ಬಾಲಕಿ ದೈಹಿಕವಾಗಿ, ಮಾನಸಿಕವಾಗಿ ಸರ್ವತೋಮುಖ ಬೆಳವಣಿಗೆ ಹೊಂದಿದ ನಂತರ ಸರ್ಕಾರದ ವಿವಾಹದ ವಯಸ್ಸಿನ ಅನುಸಾರ ಪೋಷಕರು ಮಕ್ಕಳ ಮದುವೆ ಮಾಡಬೇಕು. ಬಾಲ್ಯವಿವಾಹ ಮಾಡುವುದರಿಂದ ಕಾನೂನು ಉಲ್ಲಂಘನೆಯ ಜತೆಗೆ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಚಿವುಟಿದಂತಾಗುತ್ತದೆ. ಹಾಗಾಗಿ ಯಾವ ಪೋಷಕರು ಸಹ ತಮ್ಮ ಮಕ್ಕಳ ಹಿತದೃಷ್ಟಿಯಿಂದ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗಿಗೆ ಆಸ್ಪದ ನೀಡಬಾರದು ಎಂದು ಹೇಳಿದರು.

ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶಾಂತಕುಮಾರಿ ಮಾತನಾಡಿ, ಬಾಲ್ಯವಿವಾಹ ಜರುಗಲು ಬಡತನ, ಅನಕ್ಷರತೆ ಕಾರಣವಾಗಿದ್ದು ಬಾಲ್ಯ ವಿವಾಹದಿಂದ ಮಗುವಿನ ಬಾಲ್ಯವನ್ನೇ ಕಿತ್ತುಕೊಂಡಂತಾಗುತ್ತದೆ. ಬಾಲ್ಯದಲ್ಲಿಯೇ ಸಂಸಾರದ ಜವಾಬ್ದಾರಿ ಹೊರಿಸುವುದರಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದಾಗಿ ಆತ್ಮಹತ್ಯೆಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮಗಳ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098, ಪೊಲೀಸ್ ಸಹಾಯವಾಣಿ 112ಕ್ಕೆ ಮಾಹಿತಿ ನೀಡಿ. ಬಾಲ್ಯ ವಿವಾಹ ಮಾಡಿದರೆ 2 ವರ್ಷ ಜೈಲು ಹಾಗೂ 1 ಲಕ್ಷ ರು. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಆರೋಗ್ಯ ಇಲಾಖೆಯ ಮಹಾಲಕ್ಷ್ಮಿ, ಶಿಕ್ಷಕಿ ಭಾರತಿ, ಶಶಿಕುಮಾರ್, ರವಿಕುಮಾರ್, ಸುರೇಖಾ, ಮೈತ್ರಾ, ಗಾಯಿತ್ರಿ, ಏಕಾಂತಮ್ಮ,ಗಂಗಮ್ಮ, ಯಲ್ಲಮ್ಮ ಮುಂತಾದವರು ಹಾಜರಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ