ಐತಿಹಾಸಿಕ, ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ಡಿಸಿ ಸೂಚನೆ

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 01:54 PM IST
Soolekere

ಸಾರಾಂಶ

    ಏಷ್ಯಾದ 2ನೇ ಅತಿ ದೊಡ್ಡ ಮಾನವ ನಿರ್ಮಿತ ಸೂಳೆಕೆರೆ (ಶಾಂತಿಸಾಗರ) ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಹಿನ್ನೆಲೆ ಇಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

 ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಹಾಗೂ ಪ್ರಾಕೃತಿಕ ಸೌಂದರ್ಯರಾಶಿ ಹೊಂದಿರುವ ಪ್ರವಾಸಿ ತಾಣ, ಏಷ್ಯಾದ 2ನೇ ಅತಿ ದೊಡ್ಡ ಮಾನವ ನಿರ್ಮಿತ ಸೂಳೆಕೆರೆ (ಶಾಂತಿಸಾಗರ) ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಹಿನ್ನೆಲೆ ಇಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರವಾಸಿಗರ ಅನುಕೂಲಕ್ಕಾಗಿ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಉದ್ಯಾನವನ, ಪಾರ್ಕಿಂಗ್, ಬೋಟಿಂಗ್ ಸೌಲಭ್ಯ ಹಾಗೂ ವಾಣಿಜ್ಯ ಕೊಠಡಿ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಒಂದೆಡೆ ಈ ತಾಣಕ್ಕೆ ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನೊಂದೆಡೆ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನೈಸರ್ಗಿಕ ವಾತಾವರಣ ಕಲುಷಿತಗೊಳ್ಳುತ್ತಿದೆ ಎಂದಿದ್ದಾರೆ.

ಪ್ರವಾಸಿಗರು ನೀರು, ಪಾನೀಯ ಬಾಟಲಿಗಳು, ಪ್ಲಾಸ್ಟಿಕ್ ಕವರ್, ಚಾಕಲೇಟ್ ಕವರ್, ಚಿಪ್ಸ್ ಪ್ಯಾಕೇಟ್ ಇತ್ಯಾದಿ ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ಕೆರೆ ಮತ್ತು ಕೆರೆಯ ಪ್ರದೇಶದ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಕೆರೆ ಪರಿಸರ ಹಾಳಾಗುತ್ತಿದೆ. ನೀರಿನಲ್ಲಿ ಪ್ಲಾಸ್ಟಿಕ್‌ ಹಾಕುವುದರಿಂದ ಜಲಚರಗಳಿಗೂ ಹಾನಿಯಾಗುತ್ತಿದೆ. ಪ್ರಸ್ತುತ ಈ ಕೆರೆಯ ನೀರನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗೆ ಹೆಚ್ಚಾಗಿ ಭೇಟಿ ನೀಡುತ್ತಿರುವ ಪ್ರವಾಸಿಗರಿಂದಾಗಿ ಶಾಂತಿಸಾಗರದ ಪ್ರಾಚೀನ, ನೈಸರ್ಗಿಕ ಪರಿಸರ ಉಳಿಸಿಕೊಳ್ಳುವುದು ಮತ್ತು ಸಂರಕ್ಷಿಸುವುದು ಸವಾಲಿನ ಕಾರ್ಯವಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಪ್ರವಾಸಿ ತಾಣ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲ ಸೌಲಭ್ಯ, ಶೌಚಾಲಯ ವ್ಯವಸ್ಥೆ ಹಾಗೂ ಕಸದ ಬುಟ್ಟಿಗಳನ್ನು ಕಲ್ಪಿಸುವ ಮೂಲಕ ಜೂನ್ 18ಕ್ಕೆ ಅನ್ವಯ ಆಗುವಂತೆ ಏಕಬಳಕೆಯ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದುವೇಳೆ ಪ್ರವಾಸಿ ತಾಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿದಲ್ಲಿ ₹100 ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದ್ದಾರೆ. 

PREV
Read more Articles on

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ