ರಾಹುಲ್ ಗಾಂಧಿ ಜನ್ಮದಿನಕ್ಕೆ ಅನಾಥಾಶ್ರಮಕ್ಕೆ ಅಗತ್ಯ ವಸ್ತು ವಿತರಣೆ
ರಾಹುಲ್ ಗಾಂಧಿಯವರು ದೇಶದಲ್ಲಿ ಶಾಂತಿ ಹಾಗೂ ಏಕತೆಗಾಗಿ ಶ್ರಮಿಸಿ ಪ್ರೀತಿಯ ವಾತಾವರಣ ನಿರ್ಮಿಸಿದ್ದಾರೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದಂಡಿನ ಮಕ್ಕಿ ಶ್ರೀಜಿತ್ ತಿಳಿಸಿದರು.
ನಗರದಲ್ಲಿ ಗುರುವಾರ ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ರಾಹುಲ್ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ಮತ್ತೀಮರ ಸಮೀಪದ ದಿವ್ಯ ಕಾರುಣ್ಯ ಆನಂದ ಆಶ್ರಮದಲ್ಲಿ ಅನಾಥರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದರು. ಇಂದಿನ ಪರಿಸ್ಥಿತಿಯಲ್ಲಿ ದೇಶದ ವಿವಿಧ ಕಡೆ ದ್ವೇಷದ ಭಾವನೆ ಬಿತ್ತಲಾಗುತ್ತಿದೆ. ಯುವ ಕಾಂಗ್ರೆಸ್ ಪ್ರೀತಿಯ ವಾತಾವರಣ ನಿರ್ಮಾಣ ಮಾಡುತ್ತಿದೆ. ರಾಹುಲ್ ಗಾಂಧಿ ಹುಟ್ಟು ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಲು ಶಾಲಾ ಕಾಲೇಜುಗಳಿಗೆ ಪುಸ್ತಕ ವಿತರಣೆ, ರಕ್ತದಾನ, ನೇತ್ರದಾನ,ಅನಾಥರಿಗೆ ಅಗತ್ಯವಸ್ತುಗಳ ಪೂರೈಕೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಬುದ್ದಿ ಮಾಂದ್ಯ ಮಕ್ಕಳು ದೇವರ ಮಕ್ಕಳಿದ್ದಂತೆ. ಬುದ್ದಿ ಮಾಂದ್ಯರನ್ನು ಪ್ರತಿ ನಿತ್ಯ ನೋಡಿಕೊಳ್ಳುವುದು ಸುಲಭದ ಮಾತಲ್ಲ.ದಿವ್ಯ ಕಾರುಣ್ಯ ಆನಂದಾಶ್ರಮದವರು ಬುದ್ದಿ ಮಾಂದ್ಯರನ್ನು, ಅನಾಥರನ್ನು ಮಕ್ಕಳಂತೆ ಸಲುಹುತ್ತಿದ್ದಾರೆ ಎಂದರು.
ಯುವ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಹಾಗೂ ಕೆಡಿಪಿ ಸದಸ್ಯ ಸಾಜು, ಶೃಂಗೇರಿ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್ ಮಾತನಾಡಿದರು. ಅನಾಥರಿಗೆ ಬೆಡ್ ಶೀಟು, ದಿನಸಿ ವಸ್ತುಗಳು, ನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.