ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪ ನೀಡಿದ್ದ ಮೈಲಾರ ಮಹದೇವಪ್ಪ: ಡಾ. ವಿಜಯಮಹಾಂತೇಶ ದಾನಮ್ಮನವರ

KannadaprabhaNewsNetwork |  
Published : Jun 10, 2025, 02:18 AM IST
ಹಾವೇರಿ ತಾಲೂಕಿನ ಕೊರಡೂರಿನ ಗ್ರಾಮ ಸೇವಾಶ್ರಮದ ನವೀಕರಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪನವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಪುಷ್ಪಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಬ್ರಿಟಿಷ್ ಆಡಳಿತವನ್ನು ಸ್ಥಗಿತಗೊಳಿಸುವ ಪ್ರಯತ್ನದಲ್ಲಿದ್ದ ಮೈಲಾರ ಮಹಾದೇವಪ್ಪನವರು ಕೊರಡೂರು ಆಶ್ರಮ ಸ್ಥಾಪಿಸುವ ಮೂಲಕ ಈ ಭಾಗದ ಇನ್ನೂರಕ್ಕೂ ಹೆಚ್ಚು ಚಳವಳಿಗಾರರಿಗೆ ಪ್ರೇರಣೆ ನೀಡಿದ್ದರು.

ಹಾವೇರಿ: ಮಹಾತ್ಮ ಗಾಂಧೀಜಿಯವರ ಆದರ್ಶಗಳಾದ ಬಡತನ ನಿರ್ಮೂಲನೆ, ಅಸ್ಪೃಶ್ಯತೆ ನಿವಾರಣೆ ಹಾಗೂ ಸ್ವದೇಶಿ ಜಾಗೃತ ಮನೋಭಾವ ಉತ್ತೇಜನಕ್ಕೆ ಮೈಲಾರ ಮಹಾದೇವಪ್ಪನವರು ಕೊರಡೂರಿನಲ್ಲಿ ಗ್ರಾಮ ಸೇವಾಶ್ರಮ ಆರಂಭಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪ ನೀಡಿದರು. ಇಂಥ ಐತಿಹಾಸಿಕ ಹಿನ್ನೆಲೆಯ ಜಾಗವನ್ನು ನವೀಕರಣ ಮಾಡಿರುವುದು ಜಿಲ್ಲಾಡಳಿತಕ್ಕೆ ಹೆಮ್ಮೆ ಮೂಡಿಸಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಕೊರಡೂರಿನ ಗ್ರಾಮ ಸೇವಾಶ್ರಮದ ನವೀಕರಣಗೊಂಡ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಬ್ರಿಟಿಷ್ ಆಡಳಿತವನ್ನು ಸ್ಥಗಿತಗೊಳಿಸುವ ಪ್ರಯತ್ನದಲ್ಲಿದ್ದ ಮೈಲಾರ ಮಹಾದೇವಪ್ಪನವರು ಕೊರಡೂರು ಆಶ್ರಮ ಸ್ಥಾಪಿಸುವ ಮೂಲಕ ಈ ಭಾಗದ ಇನ್ನೂರಕ್ಕೂ ಹೆಚ್ಚು ಚಳವಳಿಗಾರರಿಗೆ ಪ್ರೇರಣೆ ನೀಡಿದ್ದರು. ಚಿತ್ತರಂಜನ್ ಕಲಕೋಟಿ ಅವರಿಂದ ಮೆರುಗು ಹೆಚ್ಚಿಸಿಕೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನನೆಗುದಿಗೆ ಬಿದ್ದಿತ್ತು. ಈ ನೆಲವನ್ನು ಬಾಲ್ಯದಲ್ಲೇ ಅರಿತಿದ್ದ ನಾನು ಗ್ರಾಮ ಸೇವಾಶ್ರಮ ಜೀರ್ಣೋದ್ಧಾರ ಮಾಡಲು ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳಬೇಕಾಯಿತು ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕೊರಡೂರಿನ ಗ್ರಾಮ ಸೇವಾಶ್ರಮದ ಬಗ್ಗೆ ಕಾಳಜಿ ಹೊಂದಿರುವ ಜಿಲ್ಲಾಧಿಕಾರಿಗಳು ಸ್ವಾತಂತ್ರ್ಯ ಹೋರಾಟದ ಕುರುಹುಗಳನ್ನು ಉಳಿಸುವ ಕಾರ್ಯ ಮಾಡಿರುವರು. ಹೃದಯವಂತ ಅಧಿಕಾರಿ ಇಲ್ಲಿಗೆ ಬಂದಿರುವುದು ಆನಂದ ಮತ್ತು ಅಚ್ಚರಿ ಮೂಡಿಸಿದೆ. ಜಾತಿ, ಧರ್ಮ ಮತ್ತು ಗಡಿ ತಾರತಮ್ಯವಿಲ್ಲದ ಈ ಕೇಂದ್ರ ಶಕ್ತಿ ಕೇಂದ್ರವೂ ಹೌದು ಎಂದರು. ನಿವೃತ್ತ ಪ್ರಾಧ್ಯಾಪಕ ಜಿ.ಬಿ. ಕಲಕೋಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೈಲಾರ ಮಹಾದೇವ ಅವರಿಗೆ ಕೆ.ಎಫ್. ಪಾಟೀಲ ಹಾಗೂ ಮುರಿಗೆಪ್ಪ ಎಲಿ ಅವರಂಥ ಗುರುಗಳಿಂದ ಮಾರ್ಗದರ್ಶನ ಸಿಕ್ಕಿತು. ಜ್ಞಾನದೊಂದಿಗೆ ದೇಶಭಕ್ತಿ ಕಿಚ್ಚನ್ನು ಹೆಚ್ಚಿಸಿಕೊಂಡರು. ಕೊರಡೂರಿನಲ್ಲಿ ಆರು ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಎಂಬುದು ಅಭಿಮಾನದ ಸಂಗತಿ ಎಂದರು.ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನವ್ವ ಕುರಿ, ಉಪಾಧ್ಯಕ್ಷ ಯಲ್ಲಪ್ಪ ಮಾಳಗಿ, ಗ್ರಾಮ ಸ್ವರಾಜ್ ಅಭಿಯಾನದ ರುದ್ರಮುನಿ ಆವರಗೆರೆ, ಸುಭಾಷ್ ಮಡಿವಾಳರ, ಚನ್ನಪ್ಪ ಮಡಿವಾಳರ, ವೀರಯ್ಯ ಹಿರೇಮಠ, ಚನ್ನಪ್ಪ ಅರಳಿ, ಮಲ್ಲಿಕಾರ್ಜುನ ಬಾಲೆಹೊಸೂರ, ಸಂಗಯ್ಯ ಕಿತ್ತೂರಮಠ, ಲಲಿತವ್ವ ಕೊಡಬಾಳ, ದೇವಪ್ಪ ಕಾಳೆ, ಕೆ.ಸಿ. ಕೋರಿ, ಪಿಡಿಒ ಬಸವರಾಜ ವಡ್ಡರ, ನಿರ್ಮಿತಿ ಕೇಂದ್ರದ ತಿಮ್ಮೇಶಕುಮಾರ ಇದ್ದರು. ಹತ್ತಿಮತ್ತೂರಿನ ಶಾಲಾ ಮಕ್ಕಳು ಜಾಗೃತ ಗೀತೆ ಹಾಡಿದರು. ಬಸವರಾಜ ಅರಳಿ ನಿರೂಪಿಸಿದರು. ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ಬಸವರಾಜ ಮರಳಿಹಳ್ಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ