ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಆಗ್ರಹ । ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ । ಕನ್ನಡಿಗರ ಜಾಗೃತಿ ಸಮಾವೇಶ
ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಇದರ ಗೌರವಾನ್ವಿತ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಬೈಲಾ ಅಂಗೀಕರಿಸಿದ್ದು, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡ-ಕನ್ನಡಿಗ, ಕರ್ನಾಟಕದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಿರಂತರವಾಗಿ ಕಳೆದ 110 ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಈಚಿನ ದಿನಗಳಲ್ಲಿ ಪರಿಷತ್ತು ತನ್ನ ಘನ ಉದ್ದೇಶವನ್ನು ಮರೆತಂತೆ ಕಾಣುತ್ತಿದೆ. ಅದರಲ್ಲೂ ಈಗಿನ ಅಧ್ಯಕ್ಷರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರಿಷತ್ತಿನ ಘನತೆಗೆ ಧಕ್ಕೆ ಬರುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯ ಹಾಗೂ ತಾತ್ವಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕಳೆದ 10 ವರ್ಷದಿಂದ ಬೈಲಾ ತಿದ್ದುಪಡಿ ಆಗಿವೆ. ಪರಿಷತ್ತಿನ ಅವಧಿ ವಿಸ್ತರಣೆ, ಜನತಂತ್ರ ಮಾದರಿಯಲ್ಲಿ ಆಯ್ಕೆಯಾದ 35 ಘಟಕಗಳ ಚುನಾಯಿತ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ದುರುದ್ದೇಶದಿಂದ 21 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಸೇರಿದಂತೆ ಹಲವು ತಿದ್ದುಪಡಿ ಆಗಿವೆ. ಇಂತಹ ಅಸಂವಿಧಾನಿಕ, ಸರ್ವಾಧಿಕಾರತ್ವದ ದುರುದ್ದೇಶಪೂರಿತ ಬೈಲಾ ತಿದ್ದುಪಡಿಗೆ ಯಾವುದೇ ಅವಕಾಶವನ್ನು ನೀಡಬಾರದು. ಇಂತಹ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳು ಹಾಗೂ ಅನಗತ್ಯ ಘಟಕಗಳ ಮುಖ್ಯಸ್ಥರಿಗಾಗಿ ಪ್ರತಿವರ್ಷ 19 ಲಕ್ಷ ರು. ವೆಚ್ಚ ಮಾಡಲಾಗಿದೆ. ಜತೆಗೆ 2023-24ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿ ವೆಚ್ಚದ ಬಗ್ಗೆ, ನವೀಕರಣದ ಬಗ್ಗೆ ಲೋಪಗಳನ್ನು ಎತ್ತಿಹಿಡಿದಿದ್ದು, ಈ ಎಲ್ಲದರ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚ ಮಾಹಿತಿ ನೀಡದ ರಾಜ್ಯಾಧ್ಯಕ್ಷರು ಮುಂಬರುವ ಬಳ್ಳಾರಿ ಸಮ್ಮೇಳನಕ್ಕೆ 40 ಕೋಟಿ ರು. ಅನುದಾನ ಕೇಳುತ್ತಿದ್ದಾರೆ. ಇದು ದೊಡ್ಡ ಭ್ರಷ್ಟಾಚಾರದ ಹುನ್ನಾರವಾಗಿದೆ. ಸಮ್ಮೇಳನಕ್ಕೆ ಇಷ್ಟೊಂದು ಅನುದಾನದ ಅಗತ್ಯ ಇರುವುದಿಲ್ಲ. ಸಮ್ಮೇಳನದ ವಿವಿಧ ಕಾರ್ಯ ನಿರ್ವಹಿಸಲು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳಿಂದ ಟೆಂಡರ್ ಕರೆದು ನಿರ್ಧಾರ ಕೈಗೊಳ್ಳುವುದಕ್ಕೆ ಒತ್ತು ನೀಡಬೇಕು ಒತ್ತಾಯಿಸಿದರು.
ವಕೀಲರಾದ ಶ್ರೀಪಾಲ್, ಪತ್ರಕರ್ತ ಚಂದ್ರಶೇಖರ್ ಹೊನ್ನಾಳಿ, ಎಸ್.ಬಿ. ಅಶೋಕ್ ಕುಮಾರ್ ಗಾಂಧಿ ಬಸಪ್ಪ, ದೇವಾನಂದ, ಪುಟ್ಟಯ್ಯ, ಅಕ್ಷತಾ ಮೊದಲಾದವರು ಇದ್ದರು.