ಕನ್ನಡಪ್ರಭ ವಾರ್ತೆ ಉಡುಪಿನಾಡಿನ ಹೆಸರಾಂತ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಮೇನಲ್ಲಿ ಸಾರ್ವಕಾಲಿಕ ದಾಖಲೆಯ ಆದಾಯ ಸಂಗ್ರಹವಾಗಿದೆ. ಈ ತಿಂಗಳೊಂದರಲ್ಲಿಯೇ 1.40 ಕೋಟಿ ರು.ಗಳಷ್ಟು ಹಣ ಮತ್ತು ಚಿನ್ನವನ್ನು ಭಕ್ತರು ದೇವಾಲಯದ ಹುಂಡಿಗೆ ಹಾಕಿದ್ದಾರೆ.ಇದು ರಾಜ್ಯದ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಾಲಯಗಳಲ್ಲಿ ಒಂದಾಗಿದ್ದು, ದ.ಕ. ಜಿಲ್ಲೆಯ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯದ ನಂತರ ಅತೀ ಹೆಚ್ಚು ಆದಾಯವಿರುವ ದೇವಾಲಯವಾಗಿದೆ.ಮೇನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರತಿವರ್ಷವೂ ಭಾರಿ ಸಂಖ್ಯೆಯಲ್ಲಿ ಮುಖ್ಯವಾಗಿ ಕೇರಳದ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿದಿನ ಸರಾಸರಿ 30 ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದೂ ಇದಕ್ಕೆ ಒಂದು ಕಾರಣವಾಗಿದೆ.ಇಲ್ಲಿ ಹುಂಡಿಗೆ ನಗದು ಹಣ ಮಾತ್ರವಲ್ಲದೇ, ಚಿನ್ನದ ಸರ, ಬಿಲ್ಲೆ ಇತ್ಯಾದಿಗಳನ್ನು ಹರಕೆಯ ರೂಪದಲ್ಲಿ ಕಾಣಿಕೆ ಸಲ್ಲಿಸಲಾಗುತ್ತದೆ.