ಮೈಲಾರಲಿಂಗೇಶ್ವರ ಜಾತ್ರೆಗೆ ಚಾಲನೆ: ಉತ್ತರ ದಿಕ್ಕಿಗೆ ಉಕ್ಕಿ ಹರಿದ ಹಾಲು

KannadaprabhaNewsNetwork |  
Published : Jan 26, 2026, 04:00 AM IST
ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಗೆ ಕಂಕಣಧಾರಣೆ ಹಾಗೂ ಹಾಲು ಉಕ್ಕಿಸುವ ಮೂಲಕ ಬಿಲ್ಲಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಕಾಯಿಸಿದ ಹಾಲು, ಉತ್ತರ ದಿಕ್ಕಿಗೆ ಉಕ್ಕಿ ಹರಿದಿದ್ದು, ಕಾದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕಳೆದ ಬಾರಿ ಉತ್ತರ ಈಶಾನ್ಯ ಕಡೆಗೆ ಹರಿದಿತ್ತು.

ಹೂವಿನಹಡಗಲಿ: ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ ಮಂಟಪದಲ್ಲಿ ಜ. 25ರ ರಥ ಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ 11 ದಿನಗಳ ಕಾಲ ಜರುಗುವ ಜಾತ್ರೆಗೆ ಚಾಲನೆ ನೀಡಲಾಯಿತು.

ದೇವಸ್ಥಾನದ ಮಂಟಪ ಆವರಣದಲ್ಲಿ ಆಕಳ ಸಗಣಿಯ ಕುಳ್ಳಿನಿಂದ (ಬೆರಣಿ) ಕಾಯಿಸಿದ ಹಾಲು, ಉತ್ತರ ದಿಕ್ಕಿಗೆ ಉಕ್ಕಿ ಹರಿದಿದ್ದು, ಕಾದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕಳೆದ ಬಾರಿ ಉತ್ತರ ಈಶಾನ್ಯ ಕಡೆಗೆ ಹರಿದಿತ್ತು.

ಇದಕ್ಕೂ ಮುನ್ನ ಮಂಟಪದಲ್ಲಿ ವಿವಿಧ ಪುಷ್ಪಗಳಿಂದ ಮೈಲಾರಲಿಂಗೇಶ್ವರ ಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ಸ್ವಾಮಿಗೆ ಕಂಕಣಧಾರಣೆಯ ನಂತರದಲ್ಲಿ ದೇಗುಲ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌ ಅವರು, ಅರ್ಚಕ ಪ್ರಮೋದ್‌ ಭಟ್‌, ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ, ಕಂಚಿವೀರರು, ಸರಪಳಿ ಪವಾಡ ಮಾಡುವ ಗೊರವಯ್ಯರಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ, ದೇವಸ್ಥಾನದ ಎಲ್ಲ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು.

ಜ. 25ರ ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಜಾತ್ರೆ ಜರುಗುತ್ತದೆ. ಫೆ. 4ರಂದು ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರಲಿದ್ದಾರೆ. ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಡೆಂಕಣ ಮರಡಿಯಲ್ಲಿ ಉಪವಾಸ ವ್ರತ ಮಾಡುವ ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ, ಭಂಡಾರದ ನೀರು ಮಾತ್ರ ಸೇವಿಸುತ್ತಾನೆ.

ಸಂಜೆ ವೇಳೆ ಸ್ವಾಮಿಯ ಪಲ್ಲಕ್ಕಿಯ ಮೌನ ಸವಾರಿ ಉತ್ಸವ ಡೆಂಕಣ ಮರಡಿಗೆ ತೆರಳಿ 11 ದಿನಗಳ ಕಾಲ ಅಲ್ಲಿಯೇ ಇಡಲಾಗುತ್ತದೆ. ದೇವಸ್ಥಾನದ ಅರ್ಚಕರು, ಡೆಂಕಣ ಮರಡಿಗೆ ನಿತ್ಯ ತೆರಳಿ, ದಿನಕ್ಕೆರಡು ಬಾರಿ ಪೂಜೆ ಸಲ್ಲಿಸುತ್ತಾರೆ. ಸಂಪ್ರದಾಯದಂತೆ ದೇವಸ್ಥಾನದಲ್ಲಿ ಹಾಕಲಾಗಿರುವ ಗಂಟೆಗಳನ್ನು ತೆಗೆಯಲಾಗುತ್ತದೆ. ಜತೆಗೆ ದೇವಸ್ಥಾನದಲ್ಲಿ ಯಾವುದೇ ಪೂಜೆ ಜರುಗುವುದಿಲ್ಲ. ಡೆಂಕಣ ಮರಡಿಯನ್ನು ಹಗಲು ರಾತ್ರಿ ಕಾಯುವ ಕಾಯಕದಲ್ಲಿ ಹರಕೆ ತೀರಿಸುವ ಭಕ್ತರಿಗೆ ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕ ನೀಡಲಾಗುತ್ತಿದೆ. 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತೇವೆ ಎಂದು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯ‌ರ್ ಹೇಳಿದರು.

ಜ. 25ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಹಾಲು ಉಕ್ಕಿಸಲಾಯಿತು. ಈ ಧಾರ್ಮಿಕ ಕಾರ್ಯಕ್ಕೆ ಭಕ್ತರು ಅಕ್ಕಿ, ಬೆಲ್ಲ, ದವಸ, ಧ್ಯಾನಗಳನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ಸಗಣಿಯಿಂದ ಮಾಡಿದ ಕುಳ್ಳುಗಳಿಂದ ದೇವರ ಸನ್ನಿಧಾನದಲ್ಲಿ ಹಾಲು ಕಾಯಿಸಲಾಯಿತು.

ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಕೂಗಳತೆ ದೂರದ ಡೆಂಕಣ ಮರಡಿಗೆ, ದೇವಲೋಕದ 7 ಕೋಟಿ ದೇವಾನುದೇವತೆಗಳು ಮಾರುವೇಷದಲ್ಲಿ ರಥಸಪ್ತಮಿ ದಿನವೇ ಬಂದಿರುತ್ತಾರೆ. 11 ದಿನಗಳ ಕಾಲ ಡೆಂಕಣ ಮರಡಿ ಪಕ್ಕದಲ್ಲಿರುವ ಅವ್ವನ ಮರಡಿ (ಗಂಗಿಮಾಳಮ್ಮ ಮರಡಿ) ಯಲ್ಲಿ ರಾಕ್ಷಸರೊಂದಿಗೆ ಕದನ ಮಾಡುವ ಮೈಲಾರಲಿಂಗ (ಶಿವ), ಗಂಗಿಮಾಳಮ್ಮ (ಪಾರ್ವತಿ) ಸೇರಿದಂತೆ 7 ಕೋಟಿ ದೇವಾನುದೇವತೆಗಳು, ಪೌರಾಣಿಕ ಹಿನ್ನೆಲೆಯಂತೆ ರಥಸಪ್ತಮಿಯ ದಿನದಂದು ಭಕ್ತರು, ನೈವೇದ್ಯಕ್ಕೆ ತರುವ ಸಜ್ಜೆ ಕಡಬು ಮತ್ತು ಗೊರವಯ್ಯನ ಬಳಿ ಇರುವ ಬಿಲ್ಲು ಗುರುಗಳ ಕೈಯಲ್ಲಿ ಬತ್ತಳಿಕೆಗಳನ್ನು ಇಟ್ಟುಕೊಂಡು ಪರಸ್ಪರ ಹೊಡೆದಾಡಿಕೊಳ್ಳುವ, ಕಡುಬಿನ ಕಾಳಗವೂ ಭಾನುವಾರ ರಾತ್ರಿ ದೇವಸ್ಥಾನದಿಂದ ಡೆಂಕಣ ಮರಡಿಗೆ ಹೋಗುವ ಸಂದರ್ಭದಲ್ಲಿ ನಡೆಯುತ್ತದೆ.

ಈ ಸಂದರ್ಭದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಣಿಕ ನುಡಿಯುವ ಗೊರವಯ್ಯ ಕಾರ್ಣಿಕದ ರಾಮಣ್ಣ, ಆರ್ಚಕ ಪ್ರಮೋದ ಭಟ್, ದೇವಸ್ಥಾನದ ಇಒ ಮಲ್ಲಪ್ಪ, ದೇವಸ್ಥಾನದ ಬಾಬುದಾರರು, ಸಾವಿರಾರು ಭಕ್ತರು ಆಗಮಿಸಿದ್ದರು.

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿವ ಗೊರವಯ್ಯ, ಅರ್ಚಕರು ಸೇರಿದಂತೆ 12 ಬಾಬುದಾರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಹಿಂದೆ ತಮ್ಮ ಗೌರವಧನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಬಾರಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಜ. 7ರಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಶಾಸಕ ಕೃಷ್ಣನಾಯ್ಕ ನೇತೃತ್ವದಲ್ಲಿ ಸಭೆ ಮಾಡಿ, ಅವರ ಅಹವಾಲುಗಳನ್ನು ಆಲಿಸಿದ ಬಳಿಕ, ಜಿಲ್ಲಾಡಳಿತ ತಮ್ಮ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುತ್ತೇವೆಂಬ ಭರವಸೆ ನೀಡಿದ ನಂತರದಲ್ಲಿ ಬಹಿಷ್ಕಾರದಿಂದ ಹಿಂದೆ ಸರಿದರು. ದೇವಸ್ಥಾನದ ಜಾತ್ರೆಯ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಾಸೀಟಿನಲ್ಲಿ ಹೈಟೆಕ್‌ ಕ್ಯಾಂಟೀನ್‌ ಸ್ಥಾಪನೆ: ಮಂತರ್ ಗೌಡ
ಸುಸಂಸ್ಕೃತರಾಗಿ ಬದುಕುವುದೇ ಹಿಂದುತ್ವ