ಮೈಮನ ಚಕಿತಗೊಳಿಸುವ ಕಾಖಂಡಕಿ ಕರಿ!

KannadaprabhaNewsNetwork |  
Published : Jun 27, 2024, 01:12 AM IST
ಜಜ | Kannada Prabha

ಸಾರಾಂಶ

ಬಬಲೇಶ್ವರ ತಾಲೂಕಿನ ಕಾಖಂಡಕಿಯ ಕಾರಹುಣ್ಣಿಮೆಯ ಕರಿ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿಯ ಎತ್ತುಗಳ ಮೂಲಕ ಈ ಕರಿ ಹರಿಯುವ ಕಾರ್ಯಕ್ರಮ ನೋಡಲು ಸುತ್ತಮುತ್ತಲಿನ ಏಳು ಊರುಗಳ ಜನರು ಆಗಮಿಸುತ್ತಾರೆ. ಎತ್ತುಗಳನ್ನು ಬೆದರಿಸಿ, ಹೆದರಿಸಿ ಅವುಗಳ ಜೊತೆ ಜನರು ಓಡುವ ಸ್ಪರ್ಧೆಯೇ ಬಲು ರೋಚಕ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಬಬಲೇಶ್ವರ ತಾಲೂಕಿನ ಕಾಖಂಡಕಿಯ ಕಾರಹುಣ್ಣಿಮೆಯ ಕರಿ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿಯ ಎತ್ತುಗಳ ಮೂಲಕ ಈ ಕರಿ ಹರಿಯುವ ಕಾರ್ಯಕ್ರಮ ನೋಡಲು ಸುತ್ತಮುತ್ತಲಿನ ಏಳು ಊರುಗಳ ಜನರು ಆಗಮಿಸುತ್ತಾರೆ. ಎತ್ತುಗಳನ್ನು ಬೆದರಿಸಿ, ಹೆದರಿಸಿ ಅವುಗಳ ಜೊತೆ ಜನರು ಓಡುವ ಸ್ಪರ್ಧೆಯೇ ಬಲು ರೋಚಕ.

ಕಾಖಂಡಕಿ ಕರಿ ನೋಡಬೇಕು, ಮಮದಾಪುರ ಕೆರೆ ನೋಡಬೇಕು ಎಂಬ ಗಾದೆಮಾತು ಕೂಡ ಇದೆ. ಈ ಮಾತಿನಂತೆ ಪ್ರತಿವರ್ಷವೂ ಇಲ್ಲಿಯ ಕರಿ ಹರಿಯುವ ಸಂಭ್ರಮದ ಆಟವೇ ರೋಮಾಂಚನ. ಕಾರಹುಣ್ಣಿವೆಯಾದ ಏಳನೇ ದಿನವಾದ ಜೂ.27 ನಡೆಯುವ ಈ ಕರಿ ಹರಿಯುವ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಏಳು ಊರುಗಳಿಂದ ಎತ್ತುಗಳು ಹಾಗೂ ರೈತರು, ಜನರು ಬಂದಿರುತ್ತಾರೆ. ಮಧ್ಯಾಹ್ನದಿಂದ ಸಂಜೆಯವರೆಗೆ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಾಡಿಸುವ ಈ ಕರಿ ಹರಿಯುವ ವೇಳೆ ಎತ್ತುಗಳು ಜನರನ್ನು ಎತ್ತೆತ್ತಿ ಒಗೆಯುವ ದೃಶ್ಯಗಳು ನೋಡುಗರಲ್ಲಿ ರೋಮಾಂಚನ ಹುಟ್ಟಿಸುತ್ತವೆ.

ಸಂಭ್ರಮ ನೋಡಲು ಜನ ಜಾತ್ರೆ:

ಪ್ರಾಣ ಪಣಕ್ಕಿಟ್ಟು ನಡೆಯುವ ಕರಿ ಹರಿಯುವ ಕಾರ್ಯಕ್ರಮದಲ್ಲಿ ಜನರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹದ್ದೊಂದು ಬಲು ರೋಮಾಂಚನಕಾರಿ ಹಾಗೂ ಅಪಾಯಕಾರಿಯಾದ ಕರಿ ಹರಿಯುವ ಸಂಭ್ರಮವೇ ಜನ ಸೇರಲು ಕಾರಣ. ಗ್ರಾಮದ ಹನುಮಾನ ದೇವಾಲಯಕ್ಕೆ ಪೂಜೆ ಮಾಡಿ, ಊರ ಗೌಡರ ಹಿರಿಯ ಮನೆತನವಾದ ರಾಮನಗೌಡ ಪಾಟೀಲ್ ಅವರ ಮನೆಯಿಂದ ಆರಂಭಿಸಲಾಗುತ್ತದೆ. ಕಾಖಂಡಕಿ ಸುತ್ತಮುತ್ತಲ ವಿವಿಧ ಊರುಗಳಿಂದ ಬರುವ ಎತ್ತುಗಳನ್ನು ಮಧ್ಯಾಹ್ನದ ವೇಳೆಗೆ ಬಣ್ಣ ಹಚ್ಚಿ, ರಿಬ್ಬನ್ ಕಟ್ಟಿ, ಗಂಟೆ ಕಟ್ಟಿ, ಗೆಜ್ಜೆ ಕಟ್ಟಿ ಎತ್ತುಗಳನ್ನು ಸಿಂಗರಿಸಿ, ಬಣ್ಣ ಬಣ್ಣದ ಬಟ್ಟೆ ಸುತ್ತಿ ರೆಡಿ ಮಾಡಲಾಗಿರುತ್ತದೆ. ಈ ವೇಳೆ ಊರ ಅಗಸಿ, ಪಂಚಾಯತಿ ರಸ್ತೆ, ಚಾವಡಿಕಟ್ಟೆ ಸೇರಿದಂತೆ ಕಾಖಂಡಕಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜನರು ಈ ಎತ್ತುಗಳ ಓಡಾಟ ಹಾಗೂ ಕಾದಾಟವನ್ನು ನೋಡಲು ಜನ ಕಿಕ್ಕಿರಿದು ಸೇರಿರುತ್ತಾರೆ.

ಎತ್ತು ರೊಚ್ಚಿಗೆಬ್ಬಿಸಿ ಸ್ಪರ್ಧೆ:

ಇಲ್ಲಿಗೆ ಬರುವ ಪ್ರತಿಯೊಂದು ಎತ್ತಿಗೆ ಸುತ್ತಲೂ ನಾಲ್ಕೂ ಕಡೆಗಳಿಂದ ಉದ್ದವಾದ ಹಗ್ಗವನ್ನು ಕಟ್ಟಿ ಹತ್ತಾರು ಯುವಕರಿಂದ ಎಳೆದಾಡಲಾಗುತ್ತದೆ. ಈ ವೇಳೆ ಮಧ್ಯದಲ್ಲಿ ಹೋಗುವ ಓರ್ವ ವ್ಯಕ್ತಿ ಉದ್ದನೆಯ ಕಟ್ಟಿಗೆಗೆ ಬಣ್ಣದ ಬಟ್ಟೆ ಕಟ್ಟಿಕೊಂಡು ಅದಕ್ಕೆ ತಿವಿಯುತ್ತಾನೆ. ಹೀಗೆ ಮಾಡುವುದರಿಂದ ರೊಚ್ಚಿಗೆದ್ದ ಎತ್ತುಗಳು ಸುತ್ತಮುತ್ತಲು ಇರುವವರಿಗೆ ಹಾಯಲು ಬರುತ್ತವೆ. ಈ ರೋಮಾಂಚನ ದೃಶ್ಯ ನೋಡಲು ಸೇರಿದ ಜನರಲ್ಲಿ ಕೆಲವರು ಈ ರೊಚ್ಚಿಗೆದ್ದ ಎತ್ತುಗಳ ಕೈಗೆ ಸಿಕ್ಕಿಕೊಂಡು ತಿವಿತಕ್ಕೆ ಹಾಗೂ ತುಳಿತಕ್ಕೆ ಒಳಗಾಗುತ್ತಾರೆ. ಮಧ್ಯಾಹ್ನ 2ಗಂಟೆ ವೇಳೆಗೆ ಶುರುವಾಗುವ ಈ ಕರಿ ಹರಿಯುವ ಸಂಭ್ರಮದ ಆಟ ಮೂರುಗಂಟೆಗಳವರೆಗೆ ಅಂದ್ರೆ ಸಾಯಂಕಾಲ 5ರ ವರೆಗೆ ನಡೆಯುತ್ತದೆ.

----

ಬಾಕ್ಸ್‌

ಕಾಖಂಡಕಿಯ ಕಾರಹುಣ್ಣಿಮೆ ಕರಿ ಹಿನ್ನೆಲೆ ಏನು?

ನೂರಾರು ವರ್ಷಗಳ ಹಿಂದೆ ಹೊಲದಲ್ಲಿ ಕೆಲಸ ಮಾಡಿ ಹಸಿದು ಊಟಕ್ಕೆ ಬಂದಿದ್ದ ರೈತನೊಬ್ಬ ತನ್ನ ತಾಯಿಗೆ ಊಟಕ್ಕೆ ಕೊಡು ಎಂದು ಒತ್ತಾಯಿಸುತ್ತಾನೆ. ಈ ವೇಳೆ ಆ ತಾಯಿ ಎಷ್ಟು ಅವಸರ ಮಾಡ್ತಿ ಏಳೂರಿನ ಕರಿ ತಂದವರಂತೆ ಅಂದಳಂತೆ. ಆಗ ತಾಯಿಯ ಮಾತಿಗೆ ಪ್ರಭಾವಿತನಾದ ಆ ರೈತ ನಾನು ಏಳೂರಿನ ಕರಿ ತಂದೇ ಊಟ ಮಾಡುತ್ತೇನೆ ಎಂದು ಎದ್ದು ಹೋಗುತ್ತಾನೆ. ಹೀಗೆ ಹೋದವ ಕಾರಹುಣ್ಣಿವೆ ನಡೆದಿದ್ದ ಬೇರೆ ಬೇರೆ ಊರುಗಳಿಗೆ ತೆರಳಿ ಅಲ್ಲಿ ಭಾಗವಹಿಸಿದ್ದ ಎತ್ತುಗಳ ಜವಿ(ಬಾಲಕ್ಕೆ ಇರುವ ಕೂದಲು) ತರುತ್ತಾನೆ. ಅಂದಿನಿಂದ ಇಲ್ಲಿ ವಿಶೇಷವಾಗಿ ಕಾರಹುಣ್ಣಿಮೆ ಆಚರಣೆ ಮಾಡುತ್ತಾರೆ ಎಂಬುದು ಪ್ರತೀತಿ.

---

ಆಚರಣೆ ವೇಳೆ ಪ್ರಾಣ ಹಾನಿ, ಅವಘಡ!

ಕಳೆದ ವರ್ಷ ಅಂದರೆ 2023ರಲ್ಲಿ ನಡೆದ ಕಾರಹುಣ್ಣಿವೆ ಕರಿ ವೇಳೆ ಐದಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ನೋಡಲು ಸೇರುವ ಸಾವಿರಾರು ಜನರ ಮಧ್ಯೆ 2022ರಲ್ಲಿ ಐವರು ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಇದೇ ಅವಘಡಕ್ಕೆ ಸಿಲುಕಿ 2021ರಲ್ಲಿ ನಡೆದ ಕಾರಹುಣ್ಣಿವೆ ಸಂಭ್ರಮದಲ್ಲಿ ಎತ್ತು ತಿವಿದು ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸುತ್ತಮುತ್ತಲಿನ ಏಳು ಊರುಗಳ ಜನರು ಸೇರಿ ಆಚರಿಸುವ ಎತ್ತುಗಳ ಮೂಲಕ ಈ ಕರಿ ಹರಿಯುವ ಕಾರ್ಯಕ್ರಮ ನೋಡಲು ಎಷ್ಟು ರೋಮಾಂಚನಕಾರಿಯಾಗಿದೆಯೋ, ಅಷ್ಟೇ ಅಪಾಯಕಾರಿಯಾಗಿದೆ.

--

ಕಾರ್ಯಕ್ರಮಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ

ಗ್ರಾಮ ಪಂಚಾಯತಿ, ಪೊಲೀಸ್ ಇಲಾಖೆ ಹಾಗೂ ಹಿರಿಯರೆಲ್ಲ ಸೇರಿ ಅವಘಡಗಳು ಸಂಭವಿಸದಂತೆ ಅನೇಕ ಕ್ರಮಗಳನ್ನು ಕೈಗೊಂಡಿರುತ್ತಾರೆ. ಮುನ್ನಾದಿನವೇ ಕರಿ ಹರಿಯುವ ಜಾಗಗಳ ಸುತ್ತಲೂ ಕಟ್ಟಿಗೆಯಿಂದ ಕಟ್ಟಿ ಯಾರೂ ಒಳ ಬಾರದಂತೆ ತಡೆಯುವುದು, ನಿರಂತರವಾಗಿ ಮೈಕ್ ನಲ್ಲಿ ಅನೌನ್ಸ್ ಮಾಡುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿರುತ್ತದೆ.

---

ಕೋಟ್

ಕಾರಹುಣ್ಣಿಮೆ ವರ್ಷಕ್ಕೊಮ್ಮೆ ಬರುವ ರೈತರ ಹಬ್ಬವಾಗಿದೆ. ಮುಂಗಾರಿ ಬಿತ್ತನೆ, ಮಾಡಿ ರೈತರು ಖುಷಿಯಾಗಿರುವ ಸಮಯದಲ್ಲಿ ನಾಡಹಬ್ಬಗಳಂತೆ ಇದನ್ನು ಆಚರಣೆ ಮಾಡಲಾಗುತ್ತದೆ. ರೈತನ ಸಾಥಿಯಾಗಿರುವ ಬಸವಣ್ಣನಿಗೆ ಹುರುಪು ಮಾಡಲು ಇದನ್ನು ಆಚರಿಸಲಾಗುತ್ತದೆ. ರೈತರು ತಾವು ಸಾಕಾಣಿಕೆ ಮಾಡಿದ ಎತ್ತುಗಳ ತಾಕತ್ತು ತೋರಿಸಿ ಸಂಭ್ರಮಿಸುತ್ತಾರೆ.

-ಅಶೋಕ ತಿಮಶೆಟ್ಟಿ, ರೈತ ಮುಖಂಡ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ