ಬ್ಯಾಡಗಿ: ಜಿಲ್ಲೆಯ ಹಿರಿಯ ಅಧಿಕಾರಿಗಳು ಸೂಚನೆ ಕೊಡುತ್ತಿರುವ ದೃಶ್ಯಗಳು, ಖಾಕಿಪಡೆಗಳ ಬೃಹತ್ ಪರೇಡ್, ಜೆಸಿಬಿ ಗರ್ಜನೆ ಜತೆಗೆ ನೆಲಸಮಗೊಳ್ಳುತ್ತಿರುವ ಬೃಹತ್ ಕಟ್ಟಡಗಳು, ಕೈಗೆ ಸಿಕ್ಕ ಸಾಮಾನುಗಳನ್ನು ಎಳೆದುಕೊಳ್ಳುತ್ತಿರುವ ವರ್ತಕರು...
ನಮಗೆ ಸ್ವಲ್ಪ ಕಾಲವಕಾಶ ನೀಡಬೇಕಿತ್ತು ಸರ್.. ನಮ್ಮ ಕಟ್ಟಡ ನಾವೇ ಕೆಡವಿಕೊಳ್ಳುತ್ತೇವೆ ಸರ್.., ಬಾಡಿಗೆ ಅಂಗಡಿ ಹುಡುಕಿಕೊಳ್ಳುವವರೆಗೂ ಕಾಲವಕಾಶ ಕೊಡಿ ಸರ್.. ಎನ್ನುವ ಒಂದಿಷ್ಟು ಬೇಡಿಕೆ ಬಿಟ್ಟರೆ ಅಗಲೀಕರಣಕ್ಕೆ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ.
42 ಕಟ್ಟಡ ಸ್ವಯಂಪ್ರೇರಿತ ತೆರವು: ಮುಖ್ಯರಸ್ತೆ ಅಗಲೀಕರಣ ಕಾರ್ಯ ಆರಂಭವಾಗುತ್ತಿದ್ದಂತೆ 42 ಕಟ್ಟಡಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದರು. ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಬೀರೇಶ್ವರ, ಚೌಡೇಶ್ವರಿ ಹಾಗೂ ಮಹಾವೀರ ದೇವಸ್ಥಾನಗಳನ್ನು ನಿಯಮನುಸಾರ ತೆರವುಗೊಳಿಸಲಾಯಿತು.ಅಧಿಕಾರಿಗಳ ದಂಡು: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಎಡಿಸಿ ನಾಗರಾಜ್ ಬಾಲೂರ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಮುಖ್ಯಾಧಿಕಾರಿ ವಿನಯಕುಮಾರ, ಲೋಕೋಪಯೋಗಿ ಎಇಇ ಆಂಜನೇಯ, ಎಡಿಎಲ್‌ಆರ್ ನಜೀರ್ ತಹಸೀಲ್ದಾರ್, ಲೋಕೋಪಯೋಗಿ, ಜಿಪಂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ, ಹೆಸ್ಕಾಂ, ಆರೋಗ್ಯ ಇಲಾಖೆ ಅಧಿಕಾರಿಗಳು ಪುರಸಭೆ ಪೌರಕಾರ್ಮಿಕರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಾರ್ಯಾಚರಣೆಗೆ ಸಾಥ್ ನೀಡಿದರು.ಪೊಲೀಸ್ ಬಿಗಿ ಭದ್ರತೆಯ ನಡುವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜೆಸಿಬಿಗಳೊಂದಿಗೆ ಕಾರ‍್ಯಾಚರಣೆ ನಡೆಸಿದರು. ಎಸ್ಪಿ ಯಶೋದಾ ವಂಟಗೋಡಿ ನೇತೃತ್ವದಲ್ಲಿ 1 ಡಿಎಸ್‌ಪಿ, 3 ಸಿಪಿಐ, 12 ಪಿಎಸ್‌ಐ 12 ಎಎಸ್‌ಐ, 67 ಎಚ್‌ಸಿ ಮತ್ತು ಕಾನ್‌ಸ್ಟೇಬಲ್, 9 ಮಹಿಳಾ ಕಾನ್‌ಸ್ಟೇಬಲ್, 17 ಹೋಮ್ ಗಾರ್ಡ್ ಸೇರಿದಂತೆ 2 ಡಿಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.ಮುಖ್ಯರಸ್ತೆ ಅಗಲೀಕರಣಕ್ಕೆ ಜನರು ಸಹಕಾರ ನೀಡಿದ್ದಾರೆ. ಉತ್ತಮ ರಸ್ತೆ ನಿರ್ಮಾಣ ಸರ್ಕಾರದ ಗುರಿಯಾಗಿದ್ದು, ಮೊದಲ ಅವಧಿಯಲ್ಲಿ ವಿಫಲನಾಗಿದ್ದೆ, ಅಭಿವೃದ್ಧಿಗೆ ಸಾಥ್ ನೀಡಿದ ಮುಖ್ಯರಸ್ತೆಯ ಮಾಲೀಕರು, ಅಗಲೀಕರಣ ಹೋರಾಟ ಸಮಿತಿ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದಿಸುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಅಗಲೀಕರಣ ವಿವಿಧ ಕಾರಣಕ್ಕೆ ನೆನಗುದಿಗೆ ಬಿದ್ದಿತ್ತು. 303 ಆಸ್ತಿಗಳನ್ನು ಭೂ ಸ್ವಾಧೀನ ಮಾಡಲಿದ್ದೇವೆ. ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಕಟ್ಟಡ ತೆರವು ಮಾಡುತ್ತಿದ್ದೇವೆ. ಅನುದಾನದ ಕೊರತೆಯಿಲ್ಲ, ಜನರ ಸಹಕಾರ ಪಡೆದು ಮುಂದಿನ 6 ತಿಂಗಳಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮವರ ಹೇಳಿದರು.ಪಟ್ಟಣದ ಜನತೆ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ, ಯಾರ ಮನಸ್ಸು ನೋಯಿಸುವ ಉದ್ದೇಶ ನಮಗಿಲ್ಲ. ಪರಿ ಹಾರ ತೆಗೆದುಕೊಳ್ಳದೆ ಇರುವವರು ಸಹ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಸಹಕರಿಸಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದರು.