ಕನ್ನಡಪ್ರಭ ವಾರ್ತೆ ಯಾದಗಿರಿ
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗೌರಿ ಗಣೇಶ ಚತುರ್ಥಿ ಹಬ್ಬ ಆಚರಣೆ ಕುರಿತು ಕರೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾರ್ವಜನಿಕರು ಗಣೇಶನ ಪ್ರತಿಮೆ ರಸ್ತೆಯಲ್ಲಿ ಪ್ರತಿಷ್ಠಾಪಿಸಿ ಇತರರಿಗೆ ತೊಂದರೆ ಮಾಡಬಾರದು. ಸಣ್ಣ ಪುಟ್ಟ ಗಣೇಶನ ಪ್ರತಿಮೆಯನ್ನು ಹೊರತುಪಡಿಸಿ, ಉಳಿದ ಎಲ್ಲ ಆಯೋಜಕರು ಕಡ್ಡಾಯವಾಗಿ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಪೊಲೀಸ್ ಇಲಾಖೆ, ಜೆಸ್ಕಾಂ, ನಗರಸಭೆ ಹಾಗೂ ಅಗ್ನಿಶಾಮಕ ದಳದಿಂದ ಪೂರ್ವ ಪರವಾನಿಗೆ ಪಡೆಯಬೇಕು ಎಂದು ತಿಳಿಸಲಾಯಿತು.ಜಿಲ್ಲೆಯ ಎಲ್ಲಾ ತಹಸೀಲ್ದಾರರಿಗೆ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರನ್ನು, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳನ್ನು ಕರೆಸಿ ಶಾಂತಿ ಸಭೆ ನಡೆಸುವಂತೆ ಸೂಚಿಸಲಾಯಿತು.
ಭೀಮಾ-ಕೃಷ್ಣಾ ನದಿಗಳಲ್ಲಿ ಅಥವಾ ಹರಿಯುವ ನೀರು ಹಾಗೂ ಸಾರ್ವಜನಿಕ ಕಲ್ಯಾಣಿ/ಬಾವಿಗಳಲ್ಲಿ ವಿಸರ್ಜನೆಯನ್ನು ನಿಷೇಧಿಸಲಾಗಿದೆ.ವಿಸರ್ಜನಾ ದಿನಗಳಂದು ಸ್ಥಳಕ್ಕೆ ಕೇವಲ 8 ರಿಂದ 10 ಜನರು ಮಾತ್ರ ತೆರಳಬೇಕು. ವಿಸರ್ಜನೆ ದಿನಗಳಲ್ಲಿ (1, 3, 5, 7, 9, 11 ಹಾಗೂ 21ನೇ ದಿನ) ಆಂಬ್ಯುಲೆನ್ಸ್, ಫೈರ್ ಇಂಜಿನ್, ಪೊಲೀಸ್ ಸಿಬ್ಬಂದಿ, ಈಜುಗಾರರು ಹಾಗೂ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಲಾಯಿತು.ವಿಸರ್ಜನೆಯ ಪ್ರಮುಖ ದಿನಗಳಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ವೈನ್ ಶಾಪ್, ಬಾರ್ ಹಾಗೂ ಸಗಟು/ಚಿಲ್ಲರೆ ಮದ್ಯ ಮಾರಾಟ ನಿಷೇಧಿಸಲು ಅಬಕಾರಿ ಇಲಾಖೆಗೆ ಸೂಚಿಸಲಾಯಿತು. ಮೆರವಣಿಗೆ ವಾಹನ ಚಾಲಕರು ಮದ್ಯಪಾನ ಮಾಡಿರಬಾರದು. ವಾಟ್ಸಾಪ್ ಗ್ರೂಪ್‌ಗಳಲ್ಲಿ ಕೋಮುಗಲಭೆ ಅಥವಾ ಶಾಂತಿಗೆ ಭಂಗ ತರುವ ವಿಡಿಯೋ/ಫೋಟೋ ಹಂಚಿಕೊಳ್ಳಬಾರದು. ಇಂತಹ ಪ್ರಕರಣ ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬೇಕೆಂದರು.
ವಿವಾದಾತ್ಮಕ ಸ್ಥಳ ಆಯ್ಕೆ ಮಾಡದಂತೆ ಸೂಚನೆ: ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸುತ್ತೋಲೆ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಗಣೇಶ ಪ್ರತಿಷ್ಠಾಪನೆ ಮಾಡುವಾಗ ಯಾವುದೇ ವಿವಾದಾತ್ಮಕ ಸ್ಥಳವನ್ನು ಆಯ್ಕೆ ಮಾಡದಂತೆ ನೋಡಿಕೊಳ್ಳಲು ಸುರಪುರ ವಿಭಾಗದ ಯಾದಗಿರಿ ಪೊಲೀಸ್ ಉಪ ಅಧೀಕ್ಷಕರಿಗೆ ಸೂಚಿಸಲಾಯಿತು. ನಗರ ಪ್ರದೇಶಗಳಲ್ಲಿ ಸಂಬಂಧಪಟ್ಟ ನಗರ ಪೊಲೀಸ್ ಠಾಣೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಏಕಗವಾಕ್ಷಿ ಕೇಂದ್ರ ಪ್ರಾರಂಭಿಸಿ, ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಪರವಾನಿಗೆ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು. ಪ್ರತಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ 5 ರಿಂದ 10 ಜನರ ಸಮಿತಿ ರಚಿಸಿ ಗುರುತಿನ ಚೀಟಿ ನೀಡಬೇಕು. ಹತ್ತಿರದಲ್ಲಿ ಮಸೀದಿ ಇದ್ದರೆ ಸಮಿತಿಯಲ್ಲಿ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿಯನ್ನು ಸೇರಿಸಿಕೊಳ್ಳಲು ಹಾಗೂ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತಿಳಿಸಲಾಯಿತು.