ಹೋಳಿ ಸಮಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ: ಡಿವೈಎಸ್‌ಪಿ

KannadaprabhaNewsNetwork | Published : Mar 24, 2024 1:39 AM

ಸಾರಾಂಶ

ಸ್ವಯಂಸೇವಕರಾಗಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಡಿವೈಎಸ್ಪಿ ಡಾ. ಗಿರೀಶ ಬೋಜಣ್ಣನವರ ಹೇಳಿದರು.

ರಾಣಿಬೆನ್ನೂರು: ಸ್ವಯಂಸೇವಕರಾಗಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಡಿವೈಎಸ್ಪಿ ಡಾ. ಗಿರೀಶ ಬೋಜಣ್ಣನವರ ಹೇಳಿದರು.

ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಹೋಳಿಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ದೇಶದ ಹಬ್ಬಗಳಿಗೆ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿದೆ. ಹಬ್ಬಗಳನ್ನು ಯಾರಿಗೂ ನೋವಾಗದಂತೆ ಆಚರಿಸಬೇಕು. ಅಹಿತಕರ ಘಟನೆಗೆ ಕಡಿವಾಣ ಹಾಕಿ ಸಾಮಾಜಿಕವಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಧರ್ಮವಾಗಿದೆ.

ತಹಸೀಲ್ದಾರ್‌ ಸುರೇಶಕುಮಾರ ಮಾತನಾಡಿ, ತಾಲೂಕು ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಎಲ್ಲ ಧರ್ಮದವರೂ ಸಹೋದರತ್ವ ಗುಣದಿಂದ ಬದುಕುತ್ತಿರುವದು ಶ್ಲಾಘನೀಯ. ಚುನಾವಣೆ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಇದಲ್ಲದೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಶಾಂತಿಯಿಂದ ಹಬ್ಬ ಆಚರಿಸಿರಿ. ಪ್ರಸ್ತುತ ನಗರದಲ್ಲಿ ನೀರಿನ ವ್ಯತ್ಯಯ ಇರುವುದರಿಂದ ನಗರಸಭೆಗೆ ನೀರು ಪೂರೈಸುವುದು ಸವಾಲಿನ ಕೆಲಸವಾಗಿದೆ. ನಗರದ ಜನತೆ ನೀರನ್ನು ಹಿತ-ಮಿತವಾಗಿ ಬಳಸಿರಿ ಎಂದರು. ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಹರಳಯ್ಯ ನಗರದಿಂದ ಬೆಂಕಿ ಕೊಡುವ ಪದ್ಧತಿಯು ಅನೇಕ ತಲೆಮಾರಿನಿಂದ ನಡೆದುಕೊಂಡು ಬಂದಿದೆ. ಯಾವುದೇ ಕಹಿ ಘಟನೆಗಳಿಗೆ ಅವಕಾಶವಾಗದಂತೆ ಶಾಂತಿಯುತವಾಗಿ ಹಬ್ಬ ಆಚರಣೆಯಾಗಲಿ. ಪುರುಷರು ಮಹಿಳಾ ಪೋಷಾಕು ಧರಿಸಿ ಅಸಭ್ಯ ವರ್ತನೆ ಮಾಡುವುದು ಸ್ತ್ರೀಯರಿಗೆ ಮಾಡುವ ಅವಮಾನ ಅದನ್ನು ನಿಲ್ಲಿಸಿ. ವಾರ್ನಿಸ್, ಕೆಮಿಕಲ್‌ಯುಕ್ತ ಬಣ್ಣ ಉಪಯೋಗಿಸುವುದು ಬೇಡ, ಯಾವುದೇ ಜಾತಿ-ಬೇಧಭಾವ ಇಲ್ಲದೇ ಕೋಮು ಸೌಹಾರ್ದತೆಯಿಂದ ಒಗ್ಗೂಡಿ ಹಬ್ಬ ಆಚರಿಸೋಣ ಎಂದರು.

ಸಿಪಿಐ ಶಂಕರ್, ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ನಗರಸಭೆ ಸಹಾಯಕ ಎಂಜಿನಿಯರ್ ಮಹೇಶ, ಪುಟ್ಟಪ್ಪ ಮರಿಯಮ್ಮನವರ, ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಪವಾರ, ಮಲ್ಲಿಕಾರ್ಜುನ ರೊಡ್ಡನವರ ಮಾತನಾಡಿದರು.

ಶಶಿಧರ ಬಸೇನಾಯ್ಕರ್, ಶೇರುಖಾನ ಕಾಬೂಲಿ, ರಮೇಶ ಮಾಕನೂರ, ಪ್ರಕಾಶ ಮಣೇಗಾರ, ರಾಯಣ್ಣ ಮಾಕನೂರ, ಮಲ್ಲಿಕಾರ್ಜುನ ತೆಗ್ಗಿನ, ಹನುಮಂತಪ್ಪ ಕಬ್ಬಾರ ಮತ್ತಿತರರಿದ್ದರು.

Share this article