- ಹೊನ್ನಾಳಿಯ ಬಾಲರಾಜ್ ಘಾಟ್‌ನಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಾಸಕ ಶಾಂತನಗೌಡ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಬಾಲರಾಜ್ ಘಾಟ್ ಪ್ರದೇಶದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ತುಂಗಭದ್ರಾ ನದಿ ನೀರು ಹೆಚ್ಚಾಗಿ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಠಿಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ನದಿಗೆ ತಡೆಗೋಡೆ ನಿರ್ಮಿಸುವಂತೆ ಅನೇಕ ದಶಕಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದ್ದರು. ಅವರ ಬೇಡಿಕೆ ಇದೀಗ ಸರ್ಕಾರದ ಎಸ್.ಡಿ.ಆರ್.ಎಫ್. ನಿಧಿಯಿಂದ ಈಡೇರುತ್ತಿದ್ದು, ₹6.5 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸೋಮವಾರ ಸಂಜೆ ಬಾಲರಾಜ್ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿವರ್ಷ ಮಳೆ ಬಂದಾಗ ನದಿ ನೀರಿನಮಟ್ಟ ಹೆಚ್ಚಾಗಿ ಪ್ರವಾಹ ಬಂದು ನದಿ ಪಾತ್ರದಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿತ್ತು. ಈ ಕಾರಣದಿಂದ ಇಲ್ಲಿನ ನಿವಾಸಿಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.
ಗದಗದಿಂದ ಹೊನ್ನಾಳಿ, ಈ ರಸ್ತೆಯ ವಿಸ್ತರಣೆ ಕೆಲಸ ಪ್ರಗತಿಯಲ್ಲಿದೆ. ಸರ್ಕಾರ ನಿಗದಿಪಡಿಸಿರುವ ಅಳತೆಯಂತೆಯೇ ರಸ್ತೆ ಅಗಲೀಕರಣ ಆಗಲಿದೆ. ಈ ಹಂತದಲ್ಲಿ ಏನಾದರೂ ಸಮಸ್ಯೆ, ಲೋಪಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಗಮನಕ್ಕೆ ತಂದರೆ ಖುದ್ದಾಗಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲು ಸಿದ್ಧ ಎಂದು ಶಾಸಕರು ಭರವಸೆ ನೀಡಿದರು.
- - -
ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಸಮೀಪ ತುಂಗ್ರಭದ್ರಾ ನದಿಗೆ ₹6.5 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಭೂಮಿಪೂಜೆ ನೆರವೇರಿಸಿದರು.