ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ 2026- 27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕು ಕಸಬಾ ಹೋಬಳಿಯ ಹಿರೇಹಳ್ಳಿ ಎ ಗ್ರಾಮದಲ್ಲಿ ಆಯೋಜಿಸಿದ್ದ ಹತ್ತಿ ಮತ್ತು ಮುಸುಕಿನಜೋಳ ಬೆಳೆಗಳಲ್ಲಿ ಸುಧಾರಿತ ಬೇಸಾಯ ತಾಂತ್ರಿಕತೆಗಳು, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ’ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರೈತರು ರಸಗೊಬ್ಬರಗಳನ್ನು ಬೆಳೆಗಳಿಗೆ ವೈಜ್ಞಾನಿಕವಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಮತೋಲಿತ ರಸಗೊಬ್ಬರ ಬಳಸಬೇಕು ಹಾಗೂ ಅತಿಯಾದ ರಾಸಾಯನಿಕಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುವುದನ್ನು ತಪ್ಪಿಸಲು ಹೆಚ್ಚು ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದರು.ಮುಸುಕಿನ ಜೋಳ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು, ವಿವಿಧ ಕೀಟ/ ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ಮಾತನಾಡಿ, ಮುಸುಕಿನಜೋಳದಲ್ಲಿ ಬೂಜು/ ಕೇದಿಗೆ ರೋಗ ಉಲ್ವಣಗೊಳ್ಳುತ್ತಿದ್ದು, ಇದರಿಂದ ಇಳುವರಿ ನಷ್ಟ ಸಾಧ್ಯತೆ ಇದೆ. ರೈತರು ರೋಗ ಲಕ್ಷಣ ಕಂಡ ಕೂಡಲೆ ಮೆಟಲಾಕ್ಸಿಲ್ 8 ಡಬ್ಲುಪಿ+ ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ 1 ಲೀಟರ್ ನೀರಿಗೆ 2 ಗ್ರಾಂನಂತೆ (ಎಕರೆಗೆ 600 ಗ್ರಾಂ) ಮಿಶ್ರಣ ಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ತಿಳಿಸಿದರು.
ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಶುಂಠಿ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಶ್ರೀಧರ್ ಔಟ್ ರೀಚ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.