ಪ್ರಕೃತಿಯ ಸಮತೋಲನ ಕಾಪಾಡಿ: ಮಲ್ಲಿಕಾರ್ಜುನಪ್ಪ

KannadaprabhaNewsNetwork | Updated : Jan 14 2024, 04:28 PM IST

ಸಾರಾಂಶ

ಆಮ್ಲಜನಕ ಉತ್ಪಾದನೆ, ಇಂಗಾಲದ ಚಕ್ರ ನಿಯಂತ್ರಣ, ಜೀವವೈವಿದ್ಯ ಸಂರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅರಣ್ಯಗಳು ಮತ್ತು ವನ್ಯಜೀವಿಗಳು ಪರಿಸರ ರಕ್ಷಣೆಗೆ ಅವಶ್ಯಕವಾಗಿದೆ.ವಿದ್ಯಾರ್ಥಿ ದೆಸೆಯಲ್ಲಿಯೇ ಅವರಲ್ಲಿ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮನುಕುಲಕ್ಕೆ ಪ್ರಕೃತಿಯ ಕೊಡುಗೆಯಾಗಿರುವ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಮತೋಲನವನ್ನು ಕಾಪಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಧುಗಿರಿ ಉಪ ವಿಭಾಗದ ಅರಣ್ಯ ಇಲಾಖೆಯ ಸಹಾಯಕ ವಲಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ ತಿಳಿಸಿದರು.

ಕೊರಟಗೆರೆ ತಾಲೂಕಿನಲ್ಲಿ 2023-24 ನೇ ಸಾಲಿನ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಚಿಣ್ಣರ ವನದರ್ಶನ ಪ್ರವಾಸ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವನ್ಯಜೀವಿ ಸಂರಕ್ಷಣೆಯು ಪ್ರತಿ ಮನುಷ್ಯನ ಹೊಣೆಗಾರಿಕೆಯಾಗಿದೆ, ಆಮ್ಲಜನಕ ಉತ್ಪಾದನೆ, ಇಂಗಾಲದ ಚಕ್ರ ನಿಯಂತ್ರಣ, ಜೀವವೈವಿದ್ಯ ಸಂರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅರಣ್ಯಗಳು ಮತ್ತು ವನ್ಯಜೀವಿಗಳು ಪರಿಸರ ರಕ್ಷಣೆಗೆ ಅವಶ್ಯಕವಾಗಿದೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಅವರಲ್ಲಿ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕು.ಆದ್ದರಿಂದಲೇ ರಾಜ್ಯ ಸರ್ಕಾರದ ‘ಚಿಣ್ಣರ ವನದರ್ಶನ’ ಆಯೋಜಿಸಲಾಗಿದೆ.

ಆದ್ದರಿಂದಲೇ ಕೊರಟಗೆರೆ ತಾಲೂಕಿನಲ್ಲಿ 19 ಶಾಲೆಗಳಿಂದ ಆಯ್ಕೆಯಾಗಿರುವ 50 ವಿದ್ಯಾರ್ಥಿಗಳನ್ನು ಉಚಿತವಾಗಿ ಬೆಂಗಳೂರಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ ಕರೆದೊಯ್ಯಲು ಒಂದು ದಿನದ ಪ್ರವಾಸ ಏರ್ಪಡಿಸಲಾಗಿದೆ, ಪ್ರವಾಸ ಮುಗಿಸಿದ ನಂತರ ವಿದ್ಯಾರ್ಥಿಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಮಾತನಾಡಿ, ಅರಣ್ಯ ಇಲಾಖೆಯಿಂದ ಪ್ರೌಢಶಾಲಾ ಹಂತದ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ತಾಲೂಕಿನ 19 ಸರ್ಕಾರಿ ಪ್ರೌಢಶಾಲೆಯ ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಪ್ರತಿಭಾವಂತ 50 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಕಳುಹಿಸಲಾಗಿದೆ. 

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇಬ್ಬರು ದೈಹಿಕ ಶಿಕ್ಷಕರನ್ನು ನೇಮಕಗೊಳಿಸಿ ಕಳುಹಿಸಲಾಗಿದೆ ಎಂದು ತಿಳಿಸಿ, ಈ ಕಾರ್ಯಕ್ರಮ ರೂಪಿಸಿದ ಅರಣ್ಯ ಇಲಾಖೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿದರು.

ಕೊರಟಗೆರೆ ವಲಯ ಅರಣ್ಯಾಧಿಕಾರಿ ರವಿ, ಉಪವಲಯ ಅರಣ್ಯಾಧಿಕಾರಿ ನಾಗರಾಜು ಸೇರಿ ಅರಣ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಹಾಜರಿದ್ದರು.

 

Share this article