ರೋಗಗಳು ಹರಡದಂತೆ ಬಂದರಿನ ಸ್ವಚ್ಛತೆ ಕಾಪಾಡಿ :ಡಾ. ಪ್ರಶಾಂತ್ ಭಟ್

KannadaprabhaNewsNetwork | Published : Jul 11, 2024 1:35 AM

ಸಾರಾಂಶ

ಸಾಂಕ್ರಾಮಿಕ ರೋಗಗಳು ಹರಡದಂತೆ ಬಂದರು ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ತಿಳಿಸಿದರು. ಅವರು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಡೆಂಘಿ, ಮಲೇರಿಯಾ ಜ್ವರ, ಮೆದುಳು ಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡದಂತೆ ಬಂದರು ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದ್ದಾರೆ.

ಅವರು ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಬೋಟ್ ಮಾಲೀಕರು, ಮೀನುಗಾರರು, ಮಹಿಳಾ ಮೀನುಗಾರ ಸಂಘ, ಕೊಚ್ಚಿನ್ ಶಿಫ್ ಯಾರ್ಡ್ ಉಡುಪಿ ಹಾಗೂ ಬಂದರಿನ ಇರುವ ವಿವಿಧ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡೆಂಘಿ, ಮಲೇರಿಯಾ, ಚಿಕುನ್ಯಗುನ್ಯಾ, ಮೆದುಳುಜ್ವರ ಹರಡುವ ಬಗ್ಗೆ ಮುಂಜಾಗ್ರತ ಕ್ರಮ ಕೈಗೊಳ್ಳುವ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಯಿಲೆಗಳು ಬಂದ ಮೇಲೆ ಕಷ್ಟ ಪಡುವುದಕ್ಕಿಂತ, ಸೊಳ್ಳೆ ಉತ್ಪತ್ತಿ ಆಗುವ ತಾಣ ಹಾಗೂ ಉತ್ಪತ್ತಿ ಆಗದಂತೆ ತಡೆಗಟ್ಟುವ ಕುರಿತು ಮುಂಜಾಗ್ರತೆ ಕ್ರಮ ವಹಿಸಬೇಕು ಎಂದ ಅವರು, ಆರೋಗ್ಯ ನಿರ್ದೇಶಾನಾಲಯ ಆದೇಶದಂತೆ ಪ್ರತಿ ಶುಕ್ರವಾರ ಡ್ರೈ ಡೇಯಾಗಿ ಆಚರಿಸುವಂತೆ, ಅಂದು ಸೊಳ್ಳೆಗಳು ಉತ್ಪತ್ತಿಯಾಗುವಂತಹ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಬೋಟ್‌ನಲ್ಲಿ ಅಳವಡಿಸುವ ಟೈರ್‌ನಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುವುದರಿಂದ ಅವುಗಳ ಬದಲಿಗೆ ಹಗ್ಗ ಅಳವಡಿಸಬೇಕು. ಬೋಟ್‌ನಲ್ಲಿ ಉಪಯೋಗಿಸುವ ಬ್ಯಾರೆಲ್‌ಗಳನ್ನು ಮಗುಚಿ ಹಾಕಬೇಕು ಮತ್ತು ಬಂದರಿನ ಸುತ್ತಮುತ್ತ ನೀರು ನಿಲ್ಲದಂತೆ ಬಂದರಿನ ಪರಿಸರ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಒಳನಾಡು ಮತ್ತು ಬಂದರು ಇಲಾಖೆಗೆ ಸಂಬಂಧ ಪಟ್ಟಂತಹ ಜಾಗದಲ್ಲಿ ಒಣಮೀನು ತಯಾರಿಸುವ ಸಿಮೆಂಟ್ ತೊಟ್ಟಿಗಳಿಗೆ ಮುಚ್ಚಳ ಅಥವಾ ತಾಡಪಲ್ ಅಳವಡಿಸುವಂತೆ ಮಹಿಳಾ ಮೀನುಗಾರರಿಗೆ ತಿಳಿಸಿದರು.

ಸಭೆಯಲ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ಶೇ. 90ರಷ್ಟು ಬೋಟ್‌ಗಳಿಗೆ ಟೈಯರ್ ತೆಗೆದು ರೋಪ್ ಹಾಕಿದ್ದು, ಇನ್ನೂ ಉಳಿದ ಬೋಟ್‌ಗಳಿಗೂ ರೋಪ್ ಅಳವಡಿಸುವಂತೆ ಸಂಘದ ಮುಖಾಂತರ ಮಾಲೀಕರಿಗೆ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಪೌರಯುಕ್ತ ರಾಯಪ್ಪ ವಹಿಸಿದರು. ಕಾರ್ಯಕ್ರಮದಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕ ವಿವೇಕ್, ಮೀನುಗಾರಿಕೆ ಉಪ ನಿರ್ದೇಶಕ ಸವಿತಾ ಖಾದ್ರಿ ಎಸ್. ಕೆ., ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೇಷ್ಮಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಏನ್, ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share this article