ಚನ್ನಪಟ್ಟಣ: ನಗರ ಪ್ರದೇಶದಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಕಾಮಗಾರಿ ನೆಪದಲ್ಲಿ ನಗರದಲ್ಲಿ ತೋಡಿರುವ ಗುಂಡಿಗಳನ್ನು ಮುಚ್ಚದ ಕಾರಣ ಜನಪ್ರತಿನಿಧಿಗಳಾದ ನಮನ್ನು ದೂರುತ್ತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದಕೊಳ್ಳುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಸೂಚಿಸಿದರು.
ನಾನೆಂದೂ ನಿಮ್ಮ ಅಧಿಕಾರ ಹಾಗೂ ಕೆಲಸದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಗಮನ ಹರಿಸಬೇಕು. ಇದನ್ನು ನೀವು ಅರ್ಥಮಾಡಿಕೊಂಡು ಕೆಲಸ ಮಾಡಬೇಕು.
ಈಗಾಗಲೇ ಸಾಕಷ್ಟು ವಾರ್ಡ್‌ಗಳಲ್ಲಿ ರಸ್ತೆ ಡಾಂಬರೀಕರಣ ಆರಂಭವಾಗಿದೆ. ಡಾಂಬರೀಕರಣಕ್ಕೂ ಮುನ್ನ ಪೈಪ್‌ಲೈನ್ ಕಾಮಗಾರಿ ಮಾಡದೇ ರಸ್ತೆ ಡಾಂಬರೀಕರಣ ಆದ ಮೇಲೆ ಪೈಪ್‌ಲೈನ್ ಮಾಡಿ ರಸ್ತೆ ಹಾಳು ಮಾಡಲಾಗುತ್ತಿದೆ. ಇದರಿಂದ ಬಿಡುಗಡೆಯಾಗಿರುವ ಅನುದಾನದ ಹಣ ನಷ್ಟವಾಗುತ್ತಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಸೂಚಿಸಿದರು.ಇಲಾಖೆಗಳು ಸಮನ್ವಯತೆ ಇರಲಿ: ಬೆಸ್ಕಾಂ, ಅರಣ್ಯ ಇಲಾಖೆ. ಗ್ಯಾಸ್‌ಲೈನ್ ಪೈಪ್ ಅಳವಡಿಕೆ, ಅಂಗನವಾಡಿ ಕಟ್ಟಡಗಳ ಬಗ್ಗೆ ಮಾತನಾಡಿದ ಶಾಸಕರು, ಎಲ್ಲಾ ಇಲಾಖಾ ಅಧಿಕಾರಿಗಳು ಒಂದು ಸಭೆ ಮಾಡಿ, ಏನೆಲ್ಲಾ ಕಾಮಗಾರಿ ಆಗಬೇಕಿದೆ, ತೊಂದರೆಗಳನ್ನು ಚರ್ಚಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ಆಗಲಿವೆ. ಇದಕ್ಕೆ ಮುಖ್ಯವಾಗಿ ಬೇಕಿರುವುದು ಇಲಾಖೆಗಳ ನಡುವಿನ ಸಮನ್ವಯತೆ ಈ ಬಗ್ಗೆ ಎಲ್ಲರೂ ಗಮನಹರಿಸಿ. ನೀವುಗಳು ಪರಸ್ಪರ ಚರ್ಚಿಸಿ ಅನುದಾನವನ್ನು ವ್ಯರ್ಥ ಮಾಡದೇ ಉತ್ತಮವಾಗಿ ಬಳಸಿಕೊಂಡು ನಗರಾಭಿವೃದ್ಧಿಗೆ ಮುಂದಾಗುವಂತೆ ಸೂಚಿಸಿದರು.
ಸಂಚಾರ ನಿಯಮ ಪರಿಪಾಲನೆ:ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ಸವಾರರ ಅಡ್ಡಗಟ್ಟಿ ತಪಾಸಣೆ ಮಾಡುವ ಬಗ್ಗೆ ಸಂಚಾರಿ ಪೊಲೀಸರನ್ನು ಶಾಸಕರು ಪ್ರಶ್ನಿಸಿದರು. ಈ ವೇಳೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ನಾವೂ ಕ್ರಮ ಕೈಗೊಳ್ಳಲು ಮುಂದಾದರೆ ಈ ರೀತಿ ಆರೋಪ ಮಾಡುತ್ತಾರೆ. ಹೆಲ್ಮೆಟ್ ಹಾಕದೆ, ಏಕಮುಖ ರಸ್ತೆ ಸಂಚಾರ ಮಾಡುವವರನ್ನು ಹಿಡಿದಾಗ ಜನಪ್ರತಿನಿಧಿಗಳ ಹೆಸರು ಹೇಳುತ್ತಾರೆ. ಸಂಚಾರ ನಿಮಯ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ, ನಮ್ಮ ವಿರುದ್ಧ ದೂರುಗಳು ಹೇಳುತ್ತಾರೆ ಎಂದು ಪೊಲೀಸರು ನಮ್ಮ ಅಸಹಾಯಕತೆ ತೋಡಿಕೊಂಡರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಪೌರಾಯುಕ್ತ ಎಂ.ಮಹೇಂದ್ರ, ಸದಸ್ಯರಾದ ಎಂ.ಜೆ.ರೇವಣ್ಣ, ಸತೀಶ್ ಬಾಬು, ನಾಗೇಶ್, ಮಂಗಳಮ್ಮ, ಸುಮಾ ರವೀಶ್, ಲಿಯಾಕತ್, ಮತೀನ್ ಇತರರು ಹಾಜರಿದ್ದರು.ಪೋಟೊ೫ಸಿಪಿಟಿ೩:
ಚನ್ನಪಟ್ಟಣ ನಗರಸಭೆ ಸಭಾಂಗಣದಲ್ಲಿ ಶಾಸಕ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷ ವಾಸಿಲ್ ಆಲಿ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಪೌರಾಯುಕ್ತ ಎಂ.ಮಹೇಂದ್ರ, ಸದಸ್ಯರು ಹಾಜರಿದ್ದರು.