ಸೋಮರಡ್ಡಿ ಅಳವಂಡಿ
ಈ ವರ್ಷ ಮೆಕ್ಕೆಜೋಳ ದರವೂ ಭರ್ಜರಿಯಾಗಿಯೇ ಇದೆ. ಬೆಳೆಯೂ ಭರ್ಜರಿಯಾಗಿಯೇ ಬರಬಹುದು ಎಂದುಕೊಂಡಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಬೆಳೆದು ನಿಂತಿರುವ ಮೆಕ್ಕೆಜೋಳ ಕಾಳುಕಟ್ಟದೆ ಇರುವುದನ್ನು ಕಂಡು ರೈತರು ಕುಗ್ಗಿಹೋಗಿದ್ದಾರೆ.
ತಾಲೂಕಿನ ಹಿರೇಸಿಂದೋಗಿ ಗ್ರಾಮದ ನಿವಾಸಿ ಮಂಜುರಡ್ಡಿ ಹಂಗನಕಟ್ಟಿ ಅವರು ತಮ್ಮ 9 ಎಕರೆಯಲ್ಲಿ ಮೆಕ್ಕೆಜೋಳ ಹಾಕಿದ್ದಾರೆ. ಬೀಜ-ಗೊಬ್ಬರ ಸೇರಿದಂತೆ ಎಕರೆಗೆ ₹15-20 ಸಾವಿರ ಖರ್ಚು ಮಾಡಿದ್ದಾರೆ. ಬೆಳೆಯೂ ಭರ್ಜರಿಯಾಗಿಯೇ ಬಂದಿದೆ. ಬೆಳೆದು ನಿಂತಿರುವ ಮೆಕ್ಕೆಜೋಳವನ್ನು ನೋಡಿ ಈ ವರ್ಷ ಬಂಪರ್ ಲಾಭ ಸಿಗಬಹುದು ಎನ್ನುವ ನಿರೀಕ್ಷೆ ಮೂಡಿತ್ತು, ಆದರೆ ಮೆಕ್ಕೆಜೋಳದ ತೆನೆ ನೋಡಿದಾಗ ನಿರೀಕ್ಷೆ ಹುಸಿಯಾಗಿದೆ.ಅತ್ಯುತ್ತಮವಾಗಿಯೇ ಇರುವ ತೆನೆಗಳಲ್ಲಿ ಕಾಳೇ ಆಗಿಲ್ಲ. ಹೊಲದಲ್ಲಿ ಹಾಕಿರುವ 9 ಎಕರೆ ಬೆಳೆಯಲ್ಲಿಯೂ ಬಿಟ್ಟಿರುವ ತೆನೆ ಖಾಲಿ ಇದೆ. ಒಂದು ತೆನೆಗೆ ನಾಲ್ಕು ಕಾಳು ಸಹ ಇಲ್ಲ.
ಕಂಪನಿ ನಿರ್ಲಕ್ಷ್ಯ: ಸಿಂಜೆಂಟಾ ಕಂಪನಿಯ ಬೀಜಗಳು ಇದಾಗಿವೆ. ಈ ಕುರಿತು ರೈತರು ಕಂಪನಿಯ ಪ್ರತಿನಿಧಿಗಳಿಗೆ ಎಷ್ಟೇ ಹೇಳಿದರೂ ಕೇಳುತ್ತಿಲ್ಲ. ನಮ್ಮದು ದೊಡ್ಡ ಕಂಪನಿ, ನೀವು ಏನು ಮಾಡಿಕೊಳ್ಳಲು ಆಗುವುದಿಲ್ಲ. ಬೇಕಾದರೆ ಹಾಕಿದ ಬೀಜಗಳನ್ನೇ ಮತ್ತೊಮ್ಮೆ ಕೊಡುತ್ತೇವೆ, ಪರಿಹಾರ ಕೇಳಬೇಡಿ ಎಂದು ಸಿಂಜೆಂಟಾ ಕಂಪನಿ ಏರಿಯಾ ಮ್ಯಾನೇಜರ್ ಮನೋಹರ ಹೇಳುತ್ತಾರಂತೆ.
ಇದು ಒಬ್ಬ ರೈತರ ಕತೆಯಲ್ಲ, ಜಿಲ್ಲೆಯಲ್ಲಿ ಕೆಲವೊಂದಿಷ್ಟು ರೈತರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಕೃಷಿ ಇಲಾಖೆ ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದಾರೆ. ವಿಜ್ಞಾನಿಗಳು ಹೊಲಕ್ಕೆ ಭೇಟಿ ನೀಡಿ, ಸ್ಯಾಂಪಲ್ ಸಂಗ್ರಹಿಸಿಟ್ಟುಕೊಂಡಿದ್ದಾರೆ. ವಿಜ್ಞಾನಿಗಳು ವರದಿ ಕಾಯಲಾಗುತ್ತಿದೆ.
ಪರಿಹಾರಕ್ಕೆ ಆಗ್ರಹ: ಕಷ್ಟಪಟ್ಟು ಬೆಳೆ ಬೆಳೆದರೂ ಫಲ ನೀಡದೆ ಇರುವುದರಿಂದ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಬೀಜ, ಗೊಬ್ಬರ ಹಾಕಿ, ಹಗಲು, ಇರುಳು ಶ್ರಮ ವಹಿಸಿದ್ದೇವೆ. ಲಕ್ಷಾಂತರ ಬರಬೇಕಾಗಿದ್ದರೂ ನಯಾಪೈಸೆ ಬರದಿದ್ದರೆ ಹೇಗೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಬೆಳೆದ ಬೆಳೆ ಅತ್ಯುತ್ತಮವಾಗಿಯೇ ಇದ್ದರೂ ಕಾಳುಕಟ್ಟದೆ ಇದ್ದರೆ ಹೇಗೆ? ವಿಷಯ ತಿಳಿದ ಮೇಲೂ ಬೀಜ ಕಂಪನಿಯವರು ಸ್ಪಂದಿಸುತ್ತಿಲ್ಲ. ಹೀಗಾಗಿ, ಕೃಷಿ ಇಲಾಖೆಗೆ ದೂರು ನೀಡಿದ್ದೇವೆ ಎಂದು ರೈತ ಮಂಜುರಡ್ಡಿ ಹಂಗನಕಟ್ಟಿ ಹೇಳಿದರು.
ಕಾಳುಕಟ್ಟದೆ ಇರುವ ಮಾಹಿತಿ ಗೊತ್ತಾಗಿದೆ. ನಾವು ಭೇಟಿ ನೀಡಿದ್ದೇವೆ. ಆದರೆ, ಇದಕ್ಕೆಲ್ಲ ಪರಿಹಾರ ನೀಡಲು ಆಗುವುದಿಲ್ಲ. ಅತಿಯಾದ ತೇವಾಂಶದಿಂದ ಹೀಗಾಗಿದೆ. ಇದು ಹವಮಾನ ವೈಪರಿತ್ಯದಿಂದ ಆಗಿರುವ ಸಮಸ್ಯೆ ಎಂದು ಸಿಂಜೆಂಟಾ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕ ಮನೋಹರ ಹೇಳುತ್ತಾರೆ.