ರಾಣಿಬೆನ್ನೂರು ತಾಲೂಕಿನಲ್ಲಿ ಹತ್ತಿಗೆ ಪರ್ಯಾಯವಾಗಿ ಮೆಕ್ಕೆಜೋಳ ಲಗ್ಗೆ!

KannadaprabhaNewsNetwork |  
Published : Jul 10, 2025, 12:46 AM IST
ಫೋಟೊ ಶೀರ್ಷಿಕೆ: 9ಆರ್‌ಎನ್‌ಆರ್3ರಾಣಿಬೆನ್ನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳೆದು ನಿಂತಿರುವ ಮೆಕ್ಕೆಜೋಳದ ಫಸಲು  | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನಲ್ಲಿ ಪ್ರಸಕ್ತ ವರ್ಷ 2880 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಿದ್ದರೆ, ಕೇವಲ 325 ಹೆಕ್ಟೇರ್ ಸಾಧನೆಯಾಗಿದೆ. ಕೃಷಿ ಇಲಾಖೆ ಲೆಕ್ಕಾಚಾರಕ್ಕಿಂತಲೂ ಶೇ. 80ರಷ್ಟು ಹತ್ತಿ ಬೆಳೆ ಬಿತ್ತನೆ ಕಡಿಮೆಯಾಗಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ಏಷ್ಯಾ ಖಂಡದಲ್ಲಿಯೇ ಬೀಜೋತ್ಪಾದನೆಗೆ ಹೆಸರಾದ ರಾಣಿಬೆನ್ನೂರು ತಾಲೂಕು ಒಂದು ಕಾಲದಲ್ಲಿ ಹತ್ತಿ ಬೆಳೆಗೆ ಹೆಸರಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೀಟಬಾಧೆ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ಹತ್ತಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ತಾಲೂಕಿನಲ್ಲಿ ಪ್ರಸಕ್ತ ವರ್ಷ 2880 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಿದ್ದರೆ, ಕೇವಲ 325 ಹೆಕ್ಟೇರ್ ಸಾಧನೆಯಾಗಿದೆ. ಕೃಷಿ ಇಲಾಖೆ ಲೆಕ್ಕಾಚಾರಕ್ಕಿಂತಲೂ ಶೇ. 80ರಷ್ಟು ಹತ್ತಿ ಬೆಳೆ ಬಿತ್ತನೆ ಕಡಿಮೆಯಾಗಿದೆ.ಜಿನ್ನಿಂಗ್ ಫ್ಯಾಕ್ಟರಿ ಬಂದ್: ಹತ್ತಿ ಬೆಳೆ ಹೆಚ್ಚಾದ ಕಾರಣ ನಗರ ಸೇರಿ ತಾಲೂಕಿನಲ್ಲಿ 10ಕ್ಕೂ ಅಧಿಕ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಗಳು ತೆರೆದು ಸಾವಿರಾರು ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದ್ದವು. ಆದರೆ ಇತ್ತೀಚೆಗೆ ಹತ್ತಿ ಕ್ಷೇತ್ರ ಕಡಿಮೆಯಾಗಿ ಹಂತ- ಹಂತವಾಗಿ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಗಳು ಬಂದ್ ಆಗಿವೆ.

ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದ ಹತ್ತಿ ಬೆಳೆ ಆವಕದಲ್ಲೂ ಗಣನೀಯ ಕುಸಿತ ಕಂಡಿದೆ. ಹತ್ತಿ ನಂಬಿಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರ ಜೀವನವೂ ದುಸ್ತರವಾದಂತಾಗಿದೆ. 2015- 16ನೇ ಸಾಲಿನಲ್ಲಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಹತ್ತಿ ಪ್ರದೇಶ ಇದೀಗ 325 ಹೆಕ್ಟೇರ್‌ಗೆ ಬಂದು ನಿಂತಿದೆ.

ಉದ್ಯಮಕ್ಕೂ ಹೊಡೆತ: ನಗರ ಸೇರಿ ತಾಲೂಕಿನಲ್ಲಿ 10ಕ್ಕೂ ಅಧಿಕ ಜಿನ್ನಿಂಗ್ ಫ್ಯಾಕ್ಟರಿಗಳಿದ್ದವು. ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವ ಕ್ಷೇತ್ರ ಕಡಿಮೆಯಾದ ಕಾರಣ ಸದ್ಯ ಬಹುತೇಕ ಫ್ಯಾಕ್ಟರಿಗಳು ಬಂದ್ ಆಗಿವೆ. ನಗರ ಹೊರವಲಯದಲ್ಲಿ ಕಾರ್ಯನಿರ್ವಹಿಸುವ ಕೆಲವೊಂದು ಜಿನ್ನಿಂಗ್ ಫ್ಯಾಕ್ಟರಿಗಳು ಜಿಲ್ಲೆಯ ಹೊರಭಾಗದಿಂದ ಹತ್ತಿಯನ್ನು ತರಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೆಕ್ಕೆಜೋಳದತ್ತ ರೈತರು ವಾಲುತ್ತಿರುವುದರಿಂದ ಹತ್ತಿ ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಂತಾಗಿದೆ.ಎಪಿಎಂಸಿ ವಹಿವಾಟಿನಲ್ಲೂ ಕುಸಿತ: ಸ್ಥಳೀಯ ರಾಣಿಬೆನ್ನೂರು ಎಪಿಎಂಸಿಗೆ ಸ್ಥಳೀಯ ಮಾತ್ರವಲ್ಲದೆ ಬ್ಯಾಡಗಿ, ಹಿರೇಕೆರೂರು, ಹೂವಿನಹಡಗಲಿ, ಶಿಕಾರಿಪುರದಿಂದಲೂ ರೈತರು ಹತ್ತಿ ಮಾರಾಟಕ್ಕೆ ತರುತ್ತಿದ್ದರು. 2022- 23ನೇ ಸಾಲಿನಲ್ಲಿ 1,14,622 ಕ್ವಿಂಟಲ್ ಹತ್ತಿ ಆವಕವಾಗಿದ್ದು, ₹112 ಕೋಟಿ ವಹಿವಾಟಾಗಿದೆ. 23- 24ನೇ ಸಾಲಿನಲ್ಲಿ 72,535 ಕ್ವಿಂಟಲ್ ಹತ್ತಿ ಆವಕವಾಗಿದ್ದು, ₹64 ಕೋಟಿ ವ್ಯವಹಾರವಾಗಿದೆ. 2024- 25ನೇ 57,360 ಕ್ವಿಂಟಲ್ ಬಂದಿದ್ದು, ₹54 ಕೋಟಿ ವಹಿವಾಟು ನಡೆದಿದೆ. ಈ ಬಾರಿಯ ಬಿತ್ತನೆ ಕ್ಷೇತ್ರ ನೋಡಿದರೆ ಕಳೆದ ವರ್ಷಗಿಂತ ಅರ್ಧದಷ್ಟು ಹತ್ತಿ ಬರುವ ಸಾಧ್ಯತೆಯಿಲ್ಲ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ರೈತರ ಹಿಂದೇಟು: ಕೀಟಬಾಧೆ ಸಮಸ್ಯೆಯಿಂದ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದು ಮೆಕ್ಕೆಜೋಳದತ್ತ ಮುಖ ಮಾಡುತ್ತಿದ್ದಾರೆ. ಕೀಟಬಾಧೆ ಸಂಪೂರ್ಣವಾಗಿ ನಿಂತು ರೈತರಿಗೆ ಉತ್ತಮವಾಗಿ ಹತ್ತಿ ಬೆಳೆಯುತ್ತೇವೆ ಎಂಬ ಭರವಸೆ ಮೂಡಬೇಕು. ಅಂದಾಗ ರೈತರು ಮತ್ತೆ ಹತ್ತಿ ಬೆಳೆಯಲು ಮುಂದಾಗಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶಾಂತಮಣಿ ಜಿ. ತಿಳಿಸಿದರು.

PREV