ನಾಳೆ ನಗರ ಗಡ್ಡಿ ಮಠದಲ್ಲಿ ಮಕರ ಸಂಕ್ರಮಣ

KannadaprabhaNewsNetwork | Published : Jan 13, 2025 12:47 AM

ಸಾರಾಂಶ

ತಾಲೂಕಿನ ಮಹ್ಮದನಗರ ಸಮೀಪದ ನಗರ ಗಡ್ಡಿ ಮಠದಲ್ಲಿ ಮಕರ ಸಂಕ್ರಮಣ ಆಚರಣೆ ಮಾಡಲಾಗುತ್ತದೆ ಎಂದು ನಗರ ಗಡ್ಡಿ ಮಠದ ಶ್ರೀ ಶಾಂತಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಮಹ್ಮದನಗರ ಸಮೀಪದ ನಗರ ಗಡ್ಡಿ ಮಠದಲ್ಲಿ ಮಕರ ಸಂಕ್ರಮಣ ಆಚರಣೆ ಮಾಡಲಾಗುತ್ತದೆ ಎಂದು ನಗರ ಗಡ್ಡಿ ಮಠದ ಶ್ರೀ ಶಾಂತಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಚ್ಚ ಹಸಿರಿನಿಂದ ಕೂಡಿದ ತುಂಗಭದ್ರಾ ನದಿ ದಡದಲ್ಲಿ ಇರುವ ಈ ಮಠದಲ್ಲಿ ವಿಶೇಷವಾಗಿ ಉತ್ತರಾಯಣ ಪೂರ್ವಕಾಲದ ಸಮಯದಲ್ಲಿ ಪುಣ್ಯ ಸ್ನಾನಕ್ಕೆಂದು ನಾಡಿನ ಹಾಗೂ ಜಿಲ್ಲೆಯ ಸುತ್ತಲಿನ ಗ್ರಾಮಸ್ಥರು ಆಗಮಿಸುತ್ತಾರೆ. ನಂತರ ಕಾರ್ಯಕ್ರಮ ಜರುಗಲಿವೆ. ನಂತರ ಮಹಾ ಪ್ರಸಾದ ಜರುಗಲಿದೆ. ಮಂಗಳವಾರ ಬೆಳಗ್ಗೆ 9ರಿಂದ ಶ್ರೀ ಮಠದಲ್ಲಿ ಆಧ್ಯಾತ್ಮಿಕ ಶುದ್ಧಿಕರಣ, ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಲಿದೆ ಎಂದು ತಿಳಿಸಿದ್ದಾರೆ.ಇಂದು ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಆಗಮನ:

ಕೊಪ್ಪಳ ನಗರದ ಗವಿಮಠಕ್ಕೆ ಜ.13ರ ಸಂಜೆ ೫ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಕಳಸದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಲಿದೆ.ನಗರದ ಕೋಟೆ ಏರಿಯಾದ ಜಡೇಗೌಡರ ಮನೆಯಿಂದ ಶ್ರೀಮಠದವರೆಗೆ ಶ್ರೀ ಗವಿಸಿದ್ದೇಶ್ವರ ಅಜ್ಜನ ಪಲ್ಲಕ್ಕಿ ಮೆರವಣಿಗೆ ಬರಲಿದೆ.ಐತಿಹ್ಯ:

ಗವಿಮಠದ ೧೧ನೇ ಪೀಠಾಧೀಶರಾಗಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಶ್ರೀ ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಶಿಖೆ (ಜಡೆ)ಯನ್ನೇ ತೆಗೆದುಕೊಟ್ಟರು. ಆಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿದೆ. ಈ ಕಾರಣಕ್ಕಾಗಿ ಶ್ರೀಮಠದಲ್ಲಿ ಪೂಜೆಗೊಂಡ ಗವಿಸಿದ್ಧೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮುಹೂರ್ತಗೊಳಿಸಿ ಪೂಜಾದಿ ಸಲ್ಲಿಸಿದ ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆ ತರುವುದು ಸಂಪ್ರದಾಯ. ಜಡೇಗೌಡರ ಮನೆಯಲ್ಲಿಯೇ ಪೂಜಾದಿಗಳನ್ನು ತೀರಿಸಿಕೊಂಡು ಬಂದ ಗವಿಸಿದ್ಧೇಶ್ವರನನ್ನು ಪುನಃ ಆ ಮನೆಯಿಂದಲೇ ಆಮಂತ್ರಿಸುವ ಹಾಗೂ ಕರೆತರುವ ಹಿನ್ನೆಲೆ ಇದೆ.ಮುದ್ದಾಬಳ್ಳಿಯಿಂದ ಗವಿಸಿದ್ದೇಶ್ವರ ಉತ್ಸವ ಮೂರ್ತಿ ಆಗಮನ:

13ರ ಸಂಜೆ ೫ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಜರುಗಲಿದೆ. ಮುದ್ದಾಬಳ್ಳಿಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿ ಆಗಮಿಸಲಿದೆ. ಹಲಗೇರಿ ಗ್ರಾಮದ ದಿ. ವೀರನಗೌಡರು ಪಾಟೀಲ ಅವರ ಮನೆಯಿಂದ ಕಳಸ ಹಾಗೂ ಮಂಗಳಾಪೂರದಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿ ಆಗಮಿಸಲಿದೆ.

Share this article