ಡಂಬಳ: ಡಂಬಳ ಹೋಬಳಿಯ ಗ್ರಾಮಗಳಲ್ಲಿ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜನರು ಸಡಗರ, ಸಂಭ್ರಮದಿಂದ ಆಚರಿಸಿದರು. ಮಠ, ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರೆ, ಡಂಬಳ ಗ್ರಾಮದ ದೊಡ್ಡಬಸವೇಶ್ವರ ಉದ್ಯಾನದಲ್ಲಿ ನೂರಾರು ಜನರು ಕುಟುಂಬ ಸಮೇತರಾಗಿ ಸಹಭೋಜನ ಸವಿದರು.
ಹಬ್ಬದ ಊಟ: ಬಿಳಿಜೋಳ, ಸಜ್ಜೆ, ಎಳ್ಳಿನ ರೊಟ್ಟಿ, ಶೇಂಗಾ ಹಾಗೂ ಎಳ್ಳಿನ ಹೋಳಿಗೆ, ಬದನೆಕಾಯಿ ಪಲ್ಯ, ಅವರೆಕಾಳು, ಪುಂಡಿಪಲ್ಲೆ, ಎಣ್ಣೆಗಾಯಿ, ಹೆಸರುಕಾಳಿನ, ಸೌತೆಕಾಯಿ ಪಲ್ಯ, ಗಜ್ಜರಿ, ಜಿಲೇಬಿ, ಶೇಂಗಾ, ಗುರೆಳ್ಳು, ಅಗಸಿ ಹಿಂಡಿ ಸೇರಿದಂತೆ ವಿವಿಧ ಬಗೆಯ ಭಕ್ಷ್ಯ ಭೋಜನಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು.
ಸಂಕ್ರಾಂತಿ ಹಿನ್ನೆಲೆ ಗ್ರಾಮದ ಐತಿಹಾಸಿಕ ದೇವಾಲಯವಾದ ದೊಡ್ಡಬಸವೇಶ್ವರ ದೇವಾಸ್ಥಾನ ಮತ್ತು ತೋಂಟದಾರ್ಯ ಮಠಕ್ಕೆ, ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ ನೆಲೆಸಿರುವ ಕಪ್ಪತ್ತಮಲ್ಲೇಶ್ವರ ದೇವಸ್ಥಾನ, ಮರುಳಸಿದ್ಧೇಶ್ವರ ದೇವಸ್ಥಾನ, ಹನುಮ ದೇವಾಲಯ, ವೆಂಕಟಾಪುರದ ವೆಂಕಟೇಶ್ವರ ದೇವಸ್ಥಾನಕ್ಕೆ, ಪೇಠಾಆಲೂರಿನ ಹಾಲೇಶ್ವರ ಮಠಗಳಿಗೆ ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಡಂಬಳ ಹೋಬಳಿಯ ಗ್ರಾಮಗಳಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.ತುಂಬಿದ್ದ ಬಸ್‌ಗಳು: ಮುಂಡರಗಿಯಿಂದ ಡಂಬಳ ಮಾರ್ಗವಾಗಿ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸುತ್ತಿದ್ದ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು ಕಂಡುಬಂದರೆ ಮತ್ತು ಸಂಜೆಯಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತು. ಕಾಲಕಾಲೇಶ್ವರ ಸ್ವಾಮಿಗೆ ವಿಶೇಷ ಪೂಜೆ
ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಸುಕ್ಷೇತ್ರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಗುರುವಾರ ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಉತ್ತರಾಯಣ ಸಂಕ್ರಾಂತಿ ಮುಂಜಾನೆ ಹೊಂಗಿರಣಗಳು ಪಸರಿಸುತ್ತಿದ್ದಂತೆಯೇ ಈ ಭಾಗದ ಯುವಕರ ತಂಡಗಳು ಸೈಕಲ್ ಸವಾರಿ ಮಾಡುತ್ತಾ, ಹಿರಿಯರು, ಮಕ್ಕಳು ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಪ್ರಕೃತಿ ನಿರ್ಮಿತ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಲಿಂಗಸ್ವರೂಪಿಯಾದ ಕಾಲಕಾಲೇಶ್ವರ ಸ್ವಾಮಿಗೆ ಭಕ್ತ ಸಮೂಹ ಶ್ರದ್ಧಾಪೂರ್ವಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಂಗಿನಕಾಯಿ ಸಮರ್ಪಿಸಿ, ಬದುಕು ಸದಾ ಹೊಸದಾಗಿ ಬೆಳಕಾಗಿರಲಿ ಎಂದು ದೇವರಿಗೆ ಸಾಮೂಹಿಕವಾಗಿ ಪ್ರಾರ್ಥಿಸಿದರು.