ಮಕರ ಸಂಕ್ರಾಂತಿ: ಹಂಪಿಗೆ ಹರಿದು ಬಂದ ಭಕ್ತ ಸಾಗರ

KannadaprabhaNewsNetwork |  
Published : Jan 15, 2025, 12:46 AM IST
14ಎಚ್‌ಪಿಟಿ1ಮಕರ ಸಂಕ್ರಾಂತಿ ನಿಮಿತ್ತ ಹಂಪಿಯ ತುಂಗಭದ್ರಾ ನದಿಯಲ್ಲಿ ಭಕ್ತರು ಮಂಗಳವಾರ ಪುಣ್ಯ ಸ್ನಾನ ಮಾಡಿದರು. | Kannada Prabha

ಸಾರಾಂಶ

ಹಂಪಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದರು.

ಹೊಸಪೇಟೆ: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ದಕ್ಷಿಣ ಕಾಶಿ ಹಂಪಿಗೆ ಭಾರೀ ಸಂಖ್ಯೆಯಲ್ಲಿ ಮಂಗಳವಾರ ಭಕ್ತರು ಹರಿದು ಬಂದಿದ್ದು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದರು.

ಸಂಕ್ರಾಂತಿ ಹಬ್ಬದ ನಿಮಿತ್ತ ರಾಜ್ಯದ ಬೆಂಗಳೂರು, ದಾವಣಗೆರೆ, ತುಮಕೂರು, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ, ಗದಗ, ಧಾರವಾಡ, ಶಿವಮೊಗ್ಗ, ಚಿತ್ರದುರ್ಗ, ಮೈಸೂರು, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದ ಭಕ್ತರು, ಸರದಿ ಸಾಲಿನಲ್ಲಿ ಆಗಮಿಸಿ, ದೇವರಿಗೆ ತಮ್ಮ ಹರಕೆ ಅರ್ಪಿಸಿದರು. ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರೆಂದು ಹೇಳಲಾಗಿದೆ.

ಮಕರ ಸಂಕ್ರಾಂತಿಗೆ ಸೂರ್ಯ ಪಥ ಬದಲಿಸುವ ಹಿನ್ನೆಲೆಯಲ್ಲಿ ಪುಣ್ಯಸ್ನಾನ ಮಾಡಿ, ದೇವರ ದರ್ಶನ ಮಾಡಬೇಕೆಂಬ ಉದ್ದೇಶದಿಂದ ಹಂಪಿ ಹಾಗೂ ಹೊಸಪೇಟೆಯಲ್ಲಿ ಉಳಿದುಕೊಂಡಿದ್ದ ಭಕ್ತರು, ಬೆಳಗ್ಗೆ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಸಮೀಪ ಹೂ, ಹಣ್ಣು, ಕಾಯಿಗಳನ್ನು ವ್ಯಾಪಾರಸ್ಥರು ಮಾರಾಟ ಮಾಡಲು ವ್ಯವಸ್ಥೆ ಕೂಡ ಮಾಡಲಾಗಿತ್ತು. ದೂರ ದೂರುಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಹೂ, ಹಣ್ಣು, ಕಾಯಿಗಳನ್ನು ಅರ್ಪಿಸಿದರು.

ಹಂಪಿಯ ಎದುರು ಬಸವಣ್ಣ ಮಂಟಪ, ಉದ್ದಾನ ವೀರಭದ್ರೇಶ್ವರ ದೇವಾಲಯ, ಬಡವಿ ಲಿಂಗ ಸ್ಮಾರಕಗಳಲ್ಲೂ ಭಕ್ತರು ಪೂಜೆ ಸಲ್ಲಿಸಿದರು. ಇನ್ನೂ ಬಡವಿಲಿಂಗ ಸ್ಮಾರಕಕ್ಕೆ ಅರ್ಚಕರು ಜಲಾಭಿಷೇಕ ನೆರವೇರಿಸಿದರು. ಈ ಸಮಯದಲ್ಲಿ ಭಕ್ತರು ನೆರೆದು, ದೇವರಿಗೆ ನಮಿಸಿದರು. ತುಂಗಭದ್ರಾ ನದಿಯ ತಟದಲ್ಲಿ ಭಕ್ತರು ಬಗೆ ಬಗೆಯ ಭೋಜನ ಸವಿದರು.

ಹೊಸಪೇಟೆಯ ಶ್ರೀಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯ, ಈಶ್ವರ ದೇಗುಲ, ನಗರೇಶ್ವರ ದೇಗುಲ, ಜಂಬುನಾಥಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು