- ಸೂರಗೊಂಡನಕೊಪ್ಪದಲ್ಲಿ ಜಿಲ್ಲಾಧಿಕಾರಿಗಳ ನಡೆ ತಾಲೂಕಿನ ಕಡೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ, ನ್ಯಾಮತಿ ತಾಲೂಕುಗಳಾದ್ಯಂತ ರೈತರ ಹಲವಾರು ಸಮಸ್ಯೆಗಳನ್ನು ಖುದ್ದಾಗಿ, ಅಧಿಕಾರಿಗಳ ಬಳಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. 2 ವರ್ಷಗಳಲ್ಲಿ ನಮ್ಮ ಸರ್ಕಾರ ಅನೇಕ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿರುವ ತೃಪ್ತಿ ನನಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ತಾಲೂಕಿನ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಬೇಕಾಗಿದ್ದು, ಇದಕ್ಕೆ ಅಧಿಕಾರಿಗಳು ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೆಲವು ಕಾನೂನಾತ್ಮಕವಾಗಿ ಬಗೆಹರಿದರೂ, ಇನ್ನು ಕೆಲವು ಸಮಸ್ಯೆಗಳು ಮಾನವೀಯತೆ ನೆಲಗಟ್ಟಿನಲ್ಲಿ ಬಗೆಹರಿಸಬೇಕಾಗುತ್ತದೆ ಎಂದರು.
ಕಂದಾಯ ಹಾಗೂ ಅರಣ್ಯದಲ್ಲಿ ನೂರಾರು ರೈತರು ಉಳುಮೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಅವರನ್ನು ತಡೆಯುತ್ತಿದ್ದಾರೆ. ಶೀಘ್ರ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಜಮೀನು ಯಾರಿಗೆ ಸೇರಿಬೇಕೆಂಬುದನ್ನು ನಿರ್ಣಯಿಸಬೇಕು. ಪದೇಪದೇ ರೈತರಿಗೆ ತೊಂದರೆ ಕೊಡಬೇಡಿ. ಅವಳಿ ತಾಲೂಕಿನಾದ್ಯಂತ ಇ-ಸ್ವತ್ತುಗಳ ಸಮಸ್ಯೆ ಇದೆ. ಇದಕ್ಕಾಗಿ ರೈತರು ಹಾಗೂ ಸಾರ್ವಜನಿಕರು ಕಚೇರಿಗೆ ಅಲೆದಾಡುವುದೇ ಆಗಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಿ ಇ-ಸ್ವತ್ತು ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದರು.
ಅವಳಿ ತಾಲೂಕಿನಲ್ಲಿ ಅವಧಿಗೂ ಮುನ್ನವೇ ಉತ್ತಮ ಮಳೆಯಾಗಿದೆ. ರೈತರು ಭೂಮಿ ಹದ ಮಾಡಿಕೊಂಡಿದ್ದಾರೆ. ಈಗಾಗಲೇ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಅವಳಿ ತಾಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಸರ್ವೆ ಮಾಡಲಿಕ್ಕೆ ಸಿಬ್ಬಂದಿ ಕೊರತೆ ಇದೆ ಎಂದು ಹೊನ್ನಾಳಿ ಹಾಗೂ ನ್ಯಾಮತಿ ತಹಸೀಲ್ದಾರ್ ಹೇಳಿದರು. ಆಗ ದಾವಣಗೆರೆಯ ದೂಡಾ ಹಾಗೂ ಮಹಾನಗರ ಪಾಲಿಕೆಯ ಸರ್ವೆ ಅಧಿಕಾರಿಗಳನ್ನು 15 ದಿನಗಳ ಮಟ್ಟಿಗೆ 2 ತಾಲೂಕುಗಳಿಗೂ ನಿಯೋಜನೆ ಮಾಡುತ್ತೇವೆ. ಅಷ್ಟರಲ್ಲಿ ಸರ್ವೆ ಕಾರ್ಯ ಸಂಪೂರ್ಣ ಮುಗಿಯಬೇಕು ಎಂದು ತಹಸೀಲ್ದಾರ್‌ಗಳಿಗೆ ಸೂಚಿಸಿದರು.
ಅವಳಿ ತಾಲೂಕಿನಲ್ಲಿ ಮೂರು ಲಕ್ಷ ಜನರಿದ್ದಾರೆ. ಆದರೆ 62 ಅಧಿಕಾರಿಗಳು ಇದ್ದಾರೆ. 5 ಸಾವಿರಕ್ಕೆ ಒಬ್ಬ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಸಮಸ್ಯೆಗಳೂ ಬೆಳೆಯುತ್ತಿವೆ. ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಇ-ಖಾತೆಗೆ ರೈತರು ಅರ್ಜಿ ಸಲ್ಲಿಸಲೇಬೇಕು ಎಂದೇನಿಲ್ಲ. ನಾವೇ ಅವರ ದಾಖಲಾತಿಗಳನ್ನು ಸಂಗ್ರಹಿಸಿ ಇ-ಸ್ವತ್ತು ಮಾಡಿಕೊಡಬೇಕು. ಅರ್ಜಿದಾರರು ಅರ್ಜಿ ಕೊಡುವವರೆಗೂ ಕಾಯುವ ಅವಶ್ಯಕತೆ ಇಲ್ಲ. ಪಿಡಿಒಗಳು ಇದನ್ನು ಗಮನಿಸಬೇಕು ಎಂದರು.
ನ್ಯಾಮತಿ ತಹಸೀಲ್ದಾರ್ ಕವಿರಾಜ್, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ಇ.ಒ.ಗಳಾದ ರಾಘವೇಂದ್ರ, ಪ್ರಕಾಶ್, ಗ್ರೇಡ್-2 ತಹಸೀಲ್ದಾರ್ ಗೋವಿಂದಪ್ಪ, ಅಧಿಕಾರಿಗಳಾದ ಸೋಮ್ಲನಾಯ್ಕ್, ಡಾ.ಗಿರೀಶ್, ತುಂಗಾ ಮೇಲ್ದಂಡೆ ಎಇಇ ಮಂಜುನಾಥ್, ಬೆಸ್ಕಾಂ ಎಇಇಗಳಾದ ಜಯಪ್ಪ, ಶ್ರೀನಿವಾಸ ಮೂರ್ತಿ, ರಾಜಸ್ವ ನಿರೀಕ್ಷಕರಾದ ಸಂತೋಷ್, ದಿನೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
(ಕೋಟ್) ಸಾರ್ವಜನಿಕರು ಸುಖಾಸುಮ್ಮನೆ ಸರ್ಕಾರಿ ನೌಕರರು, ಸಿಬ್ಬಂದಿ ಮೇಲೆ ಲಂಚ ಆರೋಪ ಹೊರಿಸಬಾರದು. ಲಂಚ ತೆಗೆದುಕೊಂಡವರ ಹೆಸರು ಹೇಳಿ, ನಾವು ಈಗಲೇ ಕ್ರಮ ಜರುಗಿಸುತ್ತೇವೆ. ಇಲ್ಲದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ. - ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ
- - --27ಎಚ್.ಎಲ್.ಐ4.ಜೆಪಿಜಿ:
ಸೂರಗೊಂಡನಕೊಪ್ಪದಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ತಾಲೂಕಿನ ಕಡೆ ಕಾರ್ಯಕ್ರಮವನ್ನು ಹೊನ್ನಾಳಿ-ನ್ಯಾಮತಿ ಕ್ಷೇತ್ರ ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು.