ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿಗೊಳಿಸಿ, ಕಾಯ್ದೆ ರೂಪಿಸಲು ಮುಂದಾಗಿರುವುದು ಸ್ವಾಗತರ್ಹ ಆದರೆ, ಬಡ್ತಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗೂ ಅನ್ವಯಿಸುವ ರೀತಿ ನೀತಿ ರೂಪಿಸಬೇಕೆಂದು ಆಗ್ರಹಿಸಿದರು.
ಎ ಗುಂಪಿನಲ್ಲಿರುವ ಮಾದಿಗರು ಪೈಪೋಟಿ ನೀಡುವಲ್ಲಿ ದುರ್ಬಲರೆಂಬ ಕಾರಣಕ್ಕೆ ತಮಿಳುನಾಡಿನಿಂದ ವಲಸೆ ಬಂದ ಪರಿಯಾ ಹಾಗೂ ಎಕೆ, ಎಡಿಯಲ್ಲಿರುವ ಮೂಲ ಜಾತಿ ಮಾದಿಗರಲ್ಲದವರು ಕೂಡ ಎ ವರ್ಗಕ್ಕೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವೆಡೆ ಈ ಕೃತ್ಯ ಈಗಾಗಲೇ ಆಗಿದೆ ಎಂಬ ಆರೋಪ ಇದೆ. ಇದಕ್ಕೆ ಶಾಶ್ವತ ತಡೆ ಹಾಕಲು ಕಠಿಣ ಕಾನೂನು ರೂಪಿಸಬೇಕೆಂದು ಹೇಳಿದರು.ಒಳಮೀಸಲಾತಿಯಲ್ಲಿ ಎ,ಬಿ,ಸಿ ಗುಂಪುಗಳನ್ನಾಗಿಸಿದ್ದು, ಶಿಕ್ಷಣ, ಉದ್ಯೋಗ ವಿಷಯದಲ್ಲಿ ಪ್ರಥಮ ಆದ್ಯತೆ ಎ ವರ್ಗಕ್ಕೆ ನೀಡಬೇಕು. ಆದರೆ, ಎಂಡಿ, ಎಂಎಸ್ ಸೀಟು ಹಂಚಿಕೆ ವೇಳೆ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಎ ಗುಂಪನ್ನು ಕೈಬಿಟ್ಟು ಬಿ,ಸಿ ಗುಂಪಿಗೆ ಮನ್ನಣೆ ನೀಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸುವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.
ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಜಾತಿ ಗುರುತಿಸಿಕೊಳ್ಳದ ಎಕೆ, ಎಡಿ ಗುಂಪನ್ನು ಪ್ರತ್ಯೇಕಗೊಳಿಸಿತ್ತು. ಆದರೆ ರಾಜ್ಯ ಸರ್ಕಾರ ಅದನ್ನು ರದ್ದುಗೊಳಿಸಿ ಆ ಮೀಸಲಾತಿಯನ್ನು ಬಿ ಗುಂಪಿಗೆ ವರ್ಗಾಯಿಸಿತು. ಜೊತೆಗೆ ಎಕೆ, ಎಡಿ ಅವರು ಮೂಲ ಜಾತಿ ಪ್ರಕಾರ ಎ ಅಥವಾ ಬಿ ವರ್ಗಕ್ಕೆ ಸೇರಿಕೊಳ್ಳುವಂತೆ ಆದೇಶಿಸಿತ್ತು. ಈಗ ಇದನ್ನು ಕೆಲ ಪಟ್ಟಭದ್ರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಾದಿಗರು ದುರ್ಬಲರೆಂಬ ಕಾರಣಕ್ಕೆ ಎ ಗುಂಪಿಗೆ ಸುಳ್ಳು ಜಾತಿ ಹೇಳುವ ಮೂಲಕ ಬರುತ್ತಿದ್ದಾರೆ ಎಂದು ದೂರಿದರು.
ಮಾದಿಗ ಸಮುದಾಯ 35 ವರ್ಷಗಳ ಕಾಲ ಹೋರಾಟದ ಹಾದಿಯಲ್ಲಿ ಕಣ್ಣೀರು ಸುರಿಸಿ ಒಳಮೀಸಲಾತಿ ಜಾರಿಗೆ ಶ್ರಮಿಸಿದೆ. ಕೋರ್ಟ್, ಎಲ್ಲ ಸರ್ಕಾರಗಳು ನಮ್ಮ ಕುರಿತು ಪ್ರೀತಿ ತೋರಿವೆ. ಅದೇ ರೀತಿ ಈಗ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಒಗ್ಗೂಡಿ ಶ್ರಮಿಸಬೇಕು ಎಂದರು.