- ತರೀಕೆರೆಯಲ್ಲಿ ನಾಡಗೀತೆಯ ಶತ ವಸಂತ ಸಂಭ್ರಮಾಚರಣೆ ಕಾರ್ಯಕ್ರಮ
ಮಕ್ಕಳು ಶಿಸ್ತು, ಸಂಯಮ ಪಾಲಿಸಿ ಗುರು ಹಿರಿಯರಿಗೆ ಗೌರವ ಕೊಡುವ ಜತೆಗೆ ನಾಡು ನುಡಿಯ ಬಗೆಗಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸತ್ಪ್ರಜೆಗಳಾಗಬೇಕು ಎಂದು ಸಮಾಜ ಚಿಂತಕ ಮನಸುಳಿ ಮೋಹನ್ ಹೇಳಿದರು.
ಪಟ್ಟಣದ ಸದ್ವಿದ್ಯಾ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ದಾಸ ಸಾಹಿತ್ಯ ಪರಿಷತ್, ಸದ್ವಿದ್ಯಾ ಶಾಲೆ ಅಶ್ರಯದಲ್ಲಿ ನಡೆದ ರಸಋಷಿ ಕುವೆಂಪು ರಚಿಸಿದ ನಾಡಗೀತೆಯ ಶತ ವಸಂತ ಸಂಭ್ರಮಾಚರಣೆ ಉದ್ಘಾಟಿಸಿ ಮಾತ ನಾಡಿದರು. ಮಕ್ಕಳಿಗೆ ನಮ್ಮ ನಾಡು ನುಡಿ ಬಗ್ಗೆ ಹೆಮ್ಮೆಯ ವಿಚಾರಗಳನ್ನು ಶಾಲೆಗಳಲ್ಲಿ ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆ ಮೂಲಕ ಇಂಥಹ ಕಾರ್ಯಕ್ರಮಗಳನ್ನು ಮಾಡಿ ತಿಳಿಸಿಕೊಡಬೇಕು. ಇಂಥಹ ಶಾಲೆಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವುದು ಒಂದು ಸೌಭಾಗ್ಯ. ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಸದ್ವಿದ್ಯಾ ಶಾಲೆ ಮುಖ್ಯ ನಿರ್ವಾಹಕರಾದ ಹರ್ಷಿಣಿ ಕುಮಾರ್ ಮಾತನಾಡಿ, ಕರ್ನಾಟಕ ಕಟ್ಟುವಲ್ಲಿ ಮಕ್ಕಳ ಪಾತ್ರ ಮುಖ್ಯ ವಾಗಿದೆ. ನಾಡಗೀತೆಗೆ 100 ವರ್ಷಗಳಾಗಿದೆ ಇದು ಇನ್ನು 1000 ವರ್ಷಗಳಾದರೂ ಕನ್ನಡಿಗರೆಲ್ಲರ ಮನವನ್ನು ತಲುಪಬೇಕು. ಶತಕಂಠ ಗಾಯನ ಸಹಸ್ರ ಕಂಠಗಳಲ್ಲಿ ಮೊಳಗಬೇಕು. ಇಂದು ನಮ್ಮ ಶಾಲೆಯಲ್ಲಿ ನಾಡಗೀತೆ ಶತ ವಸಂತ ಸಂಭ್ರಮಾಚರಣೆ ನೆರವೇರಿದ್ದು, ನಮ್ಮ ಶಾಲಾ ಆವರಣ ಪಾವನವಾಯಿತು ಎಂದು ಹೇಳಿದರು.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ದಿನ ನಾವೆಲ್ಲರೂ ಇಲ್ಲಿ ಒಂದು ಭಾವಪೂರ್ಣ ಕ್ಷಣಕ್ಕೆ ಸಾಕ್ಷಿಗಳಗಿದ್ದೇವೆ. ನಾಡಗೀತೆ ಕೇವಲ ಒಂದು ಹಾಡಲ್ಲ, ಇದು ನಮ್ಮ ನಾಡಿನ ಆಸ್ತಿತ್ವ ಹಾಗೂ ಅಭಿಮಾನದ ಪ್ರತೀಕ. ಕವಿ ಕುವೆಂಪು ರಚಿಸಿರುವ ಜಯ ಭಾರತ ಜನನಿಯ ತನುಜಾತೆ. ಗೀತೆ ಹಾಡುವಾಗ, ಕೇಳುವಾಗ ನಮ್ಮಲ್ಲಿ ಅರ್ಪಣಾಭಾವ ಮೂಡುತ್ತದೆ. ಅದರಲ್ಲಿ ತಾಯಿ ಮಮತೆ ಇದೆ. ನಾಡಿನ ಗೌರವ ಇದೆ. ಹಾಗೆಯೇ ಈ ಸಂದರ್ಭದಲ್ಲಿ ಶತಕಂಠದಿಂದ ಶತವಸಂತ ಕಂಡ ನಾಡಗೀತೆಯನ್ನು ಶಾಲೆ ಮಕ್ಕಳೊಂದಿಗೆ ಹಾಡಿದ್ದು ಇಲ್ಲಿನ ಪರಿಸರ ದೊಂದಿಗೆ ಮಾರ್ಧನಸಿದ, ತಾಯಿ ಭುವನೇಶ್ವರಿ ಉತ್ಸವ ನೆರವೇರಿಸಿ ಪುಷ್ಪ ನಮನ ಸಲ್ಲಿಸಿರುವುದು ಧನ್ಯತೆ ಮೂಡಿಸಿದೆ ಎಂದು ಹೇಳಿದರು. ಮತ್ತೊಂದು ವಿಶೇಷ ಎಂದರೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಮಾರ್ಗದರ್ಶಿ ಕನ್ನಡಶ್ರೀ ಬಿ.ಎಸ್. ಭಗವಾನ್ ಅವರನ್ನು ಕಸಾಪ, ದಾಸ ಸಾಹಿತ್ಯ ಪರಿಷತ್, ಶಾಲೆಯಿಂದ ಸನ್ಮಾನಿಸುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ. ಭಗವಾನ್ ಅವರು ನಮ್ಮ ನಾಡಗೀತೆಯನ್ನು ಅವರದೇ ಆದ ಮಧುರ ಶೈಲಿಯಲ್ಲಿ ಇಂಪಾಗಿ ಅನೇಕ ಸರ್ಕಾರಿ ಸಮಾರಂಭಗಳಲ್ಲಿ, ಕಸಾಪ ಕಾರ್ಯಕ್ರಮಗಳಲ್ಲಿ, ಸಮ್ಮೇಳನಗಳಲ್ಲಿ 400ಕ್ಕೂ ಹೆಚ್ಚು ಬಾರಿ ಹಾಡಿದ್ದಾರೆ. ನಾಡಗೀತೆ ಅಂದ ತಕ್ಷಣ ನೆನಪಾಗುವುದು ಭಗವಾನ್ ಎಂದರೆ ಅತಿಶಯೋಕ್ತಿ ಏನಲ್ಲ, ಅಂತಹ ಹಿರಿಯರನ್ನು ಗೌರವಿಸುವುದು ಒಂದು ಪುಣ್ಯ ಕಾರ್ಯ ಎಂದರು.ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ ಯುಗದ ಕವಿ, ರಸಋಷಿ ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯಲ್ಲಿ ಕನ್ನಡ ನಾಡಿನ ಇತಿಹಾಸ, ಭವ್ಯ ಪರಂಪರೆ ಹಾಗೂ ಭೌಗೋಳಿಕ ವೈಶಿಷ್ಯ್ಯಮತ್ತು ಚಾರಿತ್ರಿಕ ವೈಭವವನ್ನು ಕವಿಗಳು ಅನಾವರಣ ಗೊಳಿಸಿ ದಾಖಲಿಸಿದ್ದಾರೆ. ಇಂತಹ ಅದ್ಭುತ ರಚನೆಯನ್ನು ಸರ್ಕಾರ ನಾಡಗೀತೆಯಾಗಿ ಅಂಗೀಕರಿಸಿರುವುದು ಸ್ತುತ್ಯಾರ್ಹ. ಇಂದು ಈ ಗೀತೆ ರಚನೆಯಾದ ಶತ ಸಂವತ್ಸರದ ಸುಸಂದರ್ಭದಲ್ಲಿ ಶತ ಕಂಠಗಳಿಂದ ಗೀತ ಗಾಯನ ಕಾರ್ಯಕ್ರಮ ಏರ್ಪಟ್ಟಿರುವುದು ಎಲ್ಲರಿಗೂ ಸಂತೋಷ ತಂದಿದೆ. ಕವಿ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಗೆ 150 ವರ್ಷಗಳಗಿದೆ ಎಂದು ಸ್ಮರಿಸುತ್ತ ಭಾವಪೂರ್ಣವಾಗಿ ಗಾಯನ ನೆರವೇರಿಸಿದರು.ಡಾ. ಮರಳುಸಿದ್ದಯ್ಯ ಪಟೇಲ್ ಶುಭಾಶಯ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯೆ ಶ್ಯಾಮಲಾ ಮಂಜುನಾಥ್ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ ಗೋಪಾಲಕೃಷ್ಣ, ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯ ಕುಮಾರ್, ಉಮಾ ದಯಾನಂದ, ಲಕ್ಷ್ಮಿ ಭಗವಾನ್, ಭವ್ಯ ರೇವಣ್ಣ, ಸಹನಾ ರಾಘವೇಂದ್ರ, ಸದ್ವಿದ್ಯಾ ಶಾಲೆ ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.--
12ಕೆಟಿಆರ್.ಕೆ.1ಃತರೀಕೆರೆಯಲ್ಲಿ ಸದ್ವಿದ್ಯಾ ಶಾಲೆಯ ಕಾರ್ಯಕ್ರಮವನ್ನು ಸಮಾಜ ಚಿಂತಕರಾದ ಮನಸುಳಿ ಮೋಹನ್ ಉದ್ಘಾಟಿಸಿದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ ಗೋಪಾಲಕೃಷ್ಣ, ಸದ್ವಿದ್ಯಾ ಶಾಲೆ ಮುಖ್ಯ ಕಾರ್ಯ ನಿರ್ವಾಹಕರಾದ ಹರ್ಷಿಣಿ ಕುಮಾರ್, ಕನ್ನಡಶ್ರೀ ಬಿ.ಎಸ್.ಭಗವಾನ್ ಮತ್ತಿತರರು ಇದ್ದರು.