25 ರಂದು ತಂಬಾಕು ಹರಾಜು ಮಾರುಕಟ್ಟೆ ಬಂದ್‌ ಗೆ ರೈತ ಮುಖಂಡರ ನಿರ್ಧಾರ

KannadaprabhaNewsNetwork |  
Published : Dec 13, 2025, 01:15 AM IST
56 | Kannada Prabha

ಸಾರಾಂಶ

The double-dealing policies of purchasing companies and the irresponsible behavior of the Tobacco Board

ಕನ್ನಡಪ್ರಭ ವಾರ್ತೆ ಹುಣಸೂರು ತಂಬಾಕಿಗೆ ಸೂಕ್ತ ಮತ್ತು ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಡಿ. 25 ರಂದು ತಂಬಾಕು ಹರಾಜು ಮಾರುಕಟ್ಟೆ ಬಂದ್ ಗೆ ರೈತ ಮುಖಂಡರು ನಿರ್ಧರಿಸಿದರು.ತಾಲೂಕಿನ ಕಟ್ಟೆಮಳಲವಾಡಿಯ ಡಿ. ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ರೈತ ಭವನದಲ್ಲಿ ಶುಕ್ರವಾರ ರಾಜ್ಯ ವರ್ಜೀನಿಯ ತಂಬಾಕು ಬೆಳೆಗಾರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಖರೀದಿ ಕಂಪನಿಗಳ ದ್ವಿಮುಖ ನೀತಿ ಮತ್ತು ತಂಬಾಕು ಮಂಡಳಿಯ ಬೇಜವಾಬ್ದಾರಿ ವರ್ತನೆಯನ್ನು ರೈತ ಮುಖಂಡರು ತೀವ್ರವಾಗಿ ಖಂಡಿಸಿ ತಂಬಾಕು ಮಾರುಕಟ್ಟೆ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಖರೀದಿದಾರರಿಗೆ ಎಚ್ಚರಿಕೆ ನೀಡಲು ನಿರ್ಧರಿಸಿದರು.ಬಂದ್ ನಂತರವೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ತಂಬಾಕು ಬೆಳೆವ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ನಾಲ್ಕು ಸಂಸದರ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಯಿತು.ಈ ವೇಳೆ ಕಾಫ್ (ಕಮಿಟಿ ಆಫ್ ಫಾರ್ಮರ್‌ಸ್‌) ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್ ಮಾತನಾಡಿ, ಪಕ್ಕದ ಆಂಧ್ರಪ್ರದೇಶದಲ್ಲಿ ತಂಬಾಕು ಬೆಳೆಗಾರರಿಗೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬೆಳೆ ಬೆಳೆದರೂ ನಮಗಿಂತ ಉತ್ತಮ ದರ ನೀಡುತ್ತಿದ್ದಾರೆ. ವಿದೇಶಗಳಿಗೆ ರಫ್ತಾಗುವ ಗುಣಮಟ್ಟದ ವರ್ಜೀನಿಯಾ ತಂಬಾಕು ಬೆಳೆಯನ್ನು ಕರ್ನಾಟಕ ಬೆಳೆಯುತ್ತಿದ್ದರೂ ಉತ್ತಮ ಗುಣಮಟ್ಟದ ಹೊಗೆಸೊಪ್ಪಿಗೆ ಕೇವಲ 300 ರೂ. ನೀಡಲಾಗುತ್ತಿದೆ. ಇದೀಗ ಕಳೆದ ಮೂರು ತಿಂಗಳಿಂದ ಸರಾಸರಿ ದರ ಪಾತಾಳ ಸೇರುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಖರೀದಿದಾರರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದರು.ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ. ಚಂದ್ರೇಗೌಡ ಮಾತನಾಡಿ, ತಂಬಾಕು ಮಂಡಳಿಯ ಫುಲ್ ಬೋರ್ಡ್ ಮೀಟಿಂಗ್‌ ವೇಳೆ ಪ್ರತಿ ಖರೀದಿದಾರರು ಖರೀದಿಸುವ ತಂಬಾಕು ಪ್ರಮಾಣವನ್ನು ತಿಳಿಸುತ್ತಾರೆ. ಇದೇ ವೇಳೆ ಮಂಡಳಿಯು ಖರೀದಿದಾರರಿಗೆ ಗುಣಮಟ್ಟದ ಹೊಗೆಸೊಪ್ಪಿನ ಜೊತೆಗೆ ಲೋ ಗ್ರೇಡ್ ಸೊಪ್ಪನ್ನೂ ಖರೀದಿಸಬೇಕೆನ್ನುವ ಷರತ್ತು ವಿಧಿಸಬೇಕು. ಗುಣಮಟ್ಟದ ಹೊಗೆಸೊಪ್ಪು ಖರೀದಿಸುವ ಕಂಪನಿಗಳು ಕಡಿಮೆ ಗುಣಮಟ್ಟದ ತಂಬಾಕು ಖರೀದಿಸಲು ಹಿಂದೇಟು ಹಾಕಿ, ಮೂರು ಕಾಸಿನ ಬೆಲೆ ನೀಡುವ ಮೂಲಕ ರೈತರಿಗೆ ಅನ್ಯಾಯ ಎಸಗುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.ಪಿರಿಯಾಪಟ್ಟಣದ ಮುಖಂಡ ಪ್ರಕಾಶ್ ರಾಜೆ ಅರಸ್ ಮಾತನಾಡಿ, ಮಂಡಳಿಯ ಅಧಿಕಾರಿಗಳು ರೈತಪರವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಖರೀದಿ ಕಂಪನಿಗಳ ಅಡಿಯಾಳಾಗಿ ಅಲ್ಲ. ಖರೀದಿದಾರರಿಗೆ ಉತ್ತಮ ದರ ನೀಡುವಲ್ಲಿ ಅಗತ್ಯ ಒತ್ತಡಗಳನ್ನು ಹಾಕಬೇಕು. ಈ ವಿಚಾರದಲ್ಲಿ ಜನಪ್ರತಿನಿಧಿಗಳು ರೈತಪರ ನಿಲುವುಗಳೊಂದಿಗೆ ಸರ್ಕಾರದ ಕಿವಿಹಿಂಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಖರೀದಿ ಕಂಪನಿಗಳ ದ್ವಿಮುಖ ನೀತಿ ಕರ್ನಾಟಕದ ರೈತರನ್ನು ದಶಕಗಳಿಂದಲೂ ಕಾಡುತ್ತಿದೆ. ರಾಜ್ಯಕ್ಕೊಂದು ನ್ಯಾಯ ಎನ್ನುವ ನೀತಿ ಅನುಸರಿಸುತ್ತಿದ್ದಾರೆ. ಈ ಬಾರಿ ರೈತರು ಇಂತಹ ಅನ್ಯಾಯವನ್ನು ಸಹಿಸುವುದಿಲ್ಲ. ಡಿ. 25ರಂದು ರಾಜ್ಯದ್ಯಂತ ಎಲ್ಲಾ ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಿ ಖರೀದಿದಾರರ ಮತ್ತು ಜನಪ್ರತಿನಿಧಿಗಳ ವಿರುದ್ಧ ನಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದೇವೆ. ನಂತರವೂ ಪರಿಸ್ಥಿತಿ ಬದಲಾಗದಿದ್ದರೆ ತಂಬಾಕು ಬೆಳೆವ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ನಾಲ್ವರು ಸಂಸದರ ಕಚೇರಿ ಮುಂಭಾಗ ತಂಬಾಕು ಬೆಳೆಗಾರರು ಧರಣಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು. ಆರ್‌ಎಂಒ ಭರವಸೆಸಭೆಗೆ ಆಗಮಿಸಿದ ಮಂಡಳಿಯ ಮೈಸೂರು ವಿಭಾಗದ ಪ್ರಾದೇಶಿಕ ಅಧಿಕಾರಿ ಕೆ. ಗೋಪಾಲ್ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿ ಕಂಪನಿಗಳಿಗೆ ಇನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಹೊಗೆಸೊಪ್ಪು ಖರೀದಿಸುವ ಒಪ್ಪಂದ ಆಗಿಲ್ಲ. ಡಿ. 25ರ ನಂತರ ಎಲ್ಲವೂ ಸುಲಲಿತವಾಗಿ ಆಗಲಿದೆ ಎಂದು ತಿಳಿಸುತ್ತಿದ್ದಾರೆ. ರಾಜ್ಯ ರೈತರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಮಂಡಳಿ ಬೆಂಬಲ ಸೂಚಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಕ್ರಮವಹಿಲಿದೆ ಎಂದು ಅವರು ಭರವಸೆ ನೀಡಿದರು.ಸಭೆಯಲ್ಲಿ ಮುಖಂಡರಾದ ಎಚ್.ಡಿ. ಕೋಟೆಯ ಬಸವರಾಜಪ್ಪ, ಶೀರೇನಹಳ್ಳೀ ಬಸವರಾಜೇಗೌಡ, ಬಿ.ಎನ್. ನಾಗರಾಜಪ್ಪ, ಚಿಲ್ಕುಂದ ಶಿವಯ್ಯ ಮುಂತಾದವರು ಮಾತನಾಡಿದರು.ಮುಖಂಡರಾದ ಕಟ್ಟೆಮಳಲವಾಡಿ ಅಶೋಕ್‌ ಕುಮಾರ್, ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಉಪಾಧ್ಯಕ್ಷ ಕಟ್ಟೆಮಳಲವಾಡಿ ಮಹದೇವ್, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಕಾಫ್ ಕಮಿಟಿ ಸದಸ್ಯರಾದ ರಾಜಶೇಖರ್, ನಿಂಗೇಗೌಡ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ರೈತ ಮುಖಂಡರಾದ ಕಿರಿಜಾಜಿ ಶಿವಶಂಕರ್, ಧನಂಜಯ್, ಅತ್ತಿಕುಪ್ಪೆ ರಾಮಕೃಷ್ಣ, ಮಾದೇಗೌಡ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ