ಕನ್ನಡಪ್ರಭ ವಾರ್ತೆ ಮೈಸೂರುಪಡೆದ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸಲಾಗಿದಲ್ಲದೇ, ಇದೀಗ ಏಕಾಏಕಿ ನೋಟಿಸ್ ನೀಡಿ ಸಾಲ ಮರುಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ರೈತರ ದೂರಿಗೆ ಸ್ಪಂದಿಸಿದ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡ ಬ್ಯಾಂಕ್ ಗೆ ತೆರಳಿ ವ್ಯವಸ್ಥಾಪಕರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿದ್ದಾರೆ.ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ವಸೂಲಾತಿಯ ನೋಟಿಸ್ ಜಾರಿ ಮಾಡಿದ್ದರಿಂದ ಆತಂಕಗೊಳಗಾಗಿದ್ದ ರೈತರು ಸಮಸ್ಯೆಯನ್ನು ಚಂದನ್ ಗೌಡ ಅವರಲ್ಲಿ ಹೇಳಿಕೊಂಡಿದ್ದರು.ಈ ವಿಷಯ ತಿಳಿದ ಚಂದನ್ ಗೌಡ ಅವರು ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿದರಲ್ಲದೇ, ರೈತರ ಜತೆ ಬ್ಯಾಂಕಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.ಇದೇ ವೇಳೆ ವಿಷಯ ತಿಳಿದು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ತ್ರಿವೇಣಿ ಅವರೇ ಸ್ಥಳಕ್ಕೆ ಆಗಮಿಸಿ, ಶಾಂತಚಿತ್ತದಿಂದಲೇ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಚಂದನ್ ಗೌಡರು ರೈತರಿಂದ ಯಾವುದೇ ರೀತಿಯ ಬಡ್ಡಿ ಪಡೆಯದೆ ಕೇವಲ ಅಸಲು ಹಣವನ್ನು ಮಾತ್ರ ಕಟ್ಟಿಸಿಕೊಳ್ಳುವಂತೆ ಕೋರಿದರು.ಚರ್ಚೆ ವೇಳೆ ಮನವಿಗೆ ಸಮ್ಮತಿಸಿದ ಬ್ಯಾಂಕ್ ಅಧಿಕಾರಿಗಳು ಅಸಲು ಹಣ ಮಾತ್ರ ಪಡೆಯುವುದಾಗಿ ಭರವಸೆ ನೀಡಿದರು.ಈ ವೇಳೆ ರೈತರೊಂದಿಗೆ ಮಾತನಾಡಿದ ಚಂದನ್ ಗೌಡರು, ಸಕಾಲಕ್ಕೆ ಸಾಲವನ್ನು ಮರುಪಾವತಿಸಬೇಕು. ಏಕೆಂದರೆ ಮತ್ತೆ ಅವಶ್ಯಕತೆ ಇದ್ದಲ್ಲಿ ಸಾಲ ಪಡೆಯಬಹುದಾಗಿದೆ ಎಂದರಲ್ಲದೇ, ಬ್ಯಾಂಕಿನ ಅಧಿಕಾರಿಗಳು ಅಸಲು ಹಣ ಮಾತ್ರ ಕಟ್ಟಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದು, ಕಾಲಾವಕಾಶದೊಳಗೆ ಹಣ ಪಾವತಿಸುವಂತೆ ಮನವಿ ಮಾಡಿದರು.ನೊಂದ ರೈತರ ಪರವಾಗಿ ಪ್ರತಿಯೊಂದು ಸಮಸ್ಯೆಗಳಿಗೆ ಕಾನೂನು, ನೀತಿ, ನಿಯಮಾನುಸಾರವಾಗಿ ಅಧಿಕಾರಿಗಳ ಮನವೊಲಿಸಿ ಪ್ರೀತಿಯಿಂದ ಎಲ್ಲಾ ಸಮಸ್ಯೆ ಪರಿಹರಿಸಿದ್ದಕ್ಕೆ ರೈತರು ಚಂದನ್ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು