ಚಿತ್ರದುರ್ಗ: ಯುವ ಜನತೆ ಮಾದಕ ವ್ಯಸನಿಗಳಾಗದೆ ಸುಂದರ ಬದುಕು ಕಟ್ಟಿಕೊಳ್ಳುವುದರ ಕಡೆ ಆಸಕ್ತಿ ಕೇಂದ್ರೀಕರಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ವತಿಯಿಂದ ಶುಕ್ರವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನರು ಎಲ್ಲ ಬಗೆಯ ದುಶ್ಚಟಗಳನ್ನು ತೊರೆದು, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿನನಂತಿಸಿದರು.ಪ್ರಸ್ತುತ ಉತ್ತಮ ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳಷ್ಟೇ ಕೆಡಲು ಇವೆ. ಕೆಟ್ಟ ದಾರಿಗಳಲ್ಲಿ ಹೆಜ್ಜೆ ಹಾಕದೆ ಓದು, ಕ್ರೀಡೆ, ಕಲೆ, ಸಾಂಸ್ಕೃತಿಕ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ಸಿಗುವ ಅವಕಾಶಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಉಜ್ವಲವಾಗಿ ಬೆಳೆಯಬೇಕು, ನಾಡಿಗೆ ಕೀರ್ತಿ ತರುವ ಕಾರ್ಯವನ್ನು ಯುವಜನರು ಮಾಡಬೇಕು ಎಂದರು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಪ್ರಸ್ತುತ ಶಿಕ್ಷಣದ ಜೊತೆಗೆ ವಿವಿಧ ರೀತಿಯ ಕೌಶಲ್ಯಗಳು ಅಗತ್ಯ. ಕಥೆ, ಕವನ ಹಾಗೂ ಭಾಷಣ ಸ್ಪರ್ಧೆ, ಚಿತ್ರಕಲೆ, ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕಲೆ, ಕೌಶಲ್ಯಗಳನ್ನು ರೂಢಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬಹುದು. ಸರಿಯಾದ ವೇದಿಕೆ ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಸುಹಾಸ್ ಮಾತನಾಡಿ, ದೇಶಕಂಡ ಸಂತಶ್ರೇಷ್ಠ ಸ್ವಾಮಿ ವಿವೇಕಾನಂದ ಅವರ ನೆನಪಿನಾರ್ಥವಾಗಿ ಪ್ರತಿ ವರ್ಷ ಯುವಜನೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ಗೀತೆ, ನೃತ್ಯ ಹಾಗೂ ಪಂಚಪ್ರಾಣ ಎಂಬ ವಿಷಯವನ್ನಾಧರಿಸಿ ಕಥೆ, ಕವನ ಹಾಗೂ ಭಾಷಣ ಸ್ಪರ್ಧೆ, ಕವನ ಬರಹ, ಭಾಷಣ, ಚಿತ್ರಕಲೆ, ವಿಜ್ಞಾನ ಮೇಳ, ಮೊಬೈಲ್ ಫೋಟೋಗ್ರಫಿ, ಉತ್ತಮ ಕರಕುಶಲ ವಸ್ತು ಪ್ರದರ್ಶನ, ಸಿದ್ಧಉಡುಪು ಹಾಗೂ ಆಹಾರ ಸಂಸ್ಕರಣೆ ಸೇರಿದಂತೆ ಒಟ್ಟು 11 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಅಂತ್ಯೋದಯ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಡಿ.ಓ.ಮುರಾರ್ಜಿ, ಸರ್ಕಾರಿ ವಿಜ್ಞಾನ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸರ್ಕಾರಿ ವಿಜ್ಞಾನ ಕಾಲೇಜು ಉಪನ್ಯಾಸಕ ನಾಗರಾಜ್ ಸ್ವಾಗತಿಸಿದರು.