-ಕನ್ನಡಪ್ರಭ ವಾರ್ತೆ ಹೊನ್ನಾಳಿಯುವಕರು ಶಿಸ್ತು, ಶ್ರದ್ಧೆಯಿಂದ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಹೊನ್ನಾಳಿ ಸರ್ಕಾರಿ ಕಾಲೇಜಿನಲ್ಲಿ 800 ಯುವತಿಯವರು, 300 ಯುವಕರು ವ್ಯಾಸಂಗ ಮಾಡುತ್ತಿದ್ದು, ಹೆಣ್ಣು ಮಕ್ಕಳಲ್ಲಿ ಕಾಣುವ ಶಿಸ್ತು, ಕಲಿಕೆಯಲ್ಲಿನ ಆಸಕ್ತಿ, ಏಕಾಗ್ರತೆ ಗಂಡು ಮಕ್ಕಳಲ್ಲಿ ಕಾಣಿಸುತ್ತಿಲ್ಲ. ಇದರಿಂದ ಬಹುಪಾಲು ಗಂಡು ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡುವಲ್ಲಿ ಹೆಣ್ಣು ಮಕ್ಕಳಿಗಿಂತ ಹಿಂದೆ ಬೀಳುವ ಸಂದರ್ಭಗಳೇ ಹೆಚ್ಚಾಗುತ್ತಿದೆ ಎಂದರು.
ಹಳ್ಳಿಗಳಲ್ಲಿ ಇಂದು ಯುವಕರಿಗೆ ಮದುವೆಯಾಗುವುದು ಕೂಡ ಕಷ್ಟಕರವಾಗುತ್ತಿದೆ, ಕಾರಣ ಸರಿಯಾದ ಶಿಕ್ಷಣ ಹಾಗೂ ಉದ್ಯೋಗ ಇರುವುದಿಲ್ಲ. ಇನ್ನೊಂದೆಡೆ ಸಾಕಷ್ಟು ಜಮೀನು, ಆಸ್ತಿ ಪಾಸ್ತಿ ಇಲ್ಲವೆಂದರೆ ಹೆಣ್ಣು ಮಕ್ಕಳ ಪೋಷಕರು ಇಂತಹ ಗಂಡು ಮಕ್ಕಳಿಗೆ ತಮ್ಮ ಮಗಳನ್ನು ಕೊಡಲು ಹಿಂದೇಟು ಹಾಕುತ್ತಾರೆ ಆದ್ದರಿಂದ ಇಂದು ಗಂಡು ಮಕ್ಕಳ ಮದುವೆಯಾಗುವುದು ಕಷ್ಟಕರವಾಗುತ್ತಿದೆ ಎಂದು ಹಾಸ್ಯಭರಿತ ಹೇಳಿಕೆ ನೀಡದರು.ಶಾಲಾ-ಕಾಲೇಜುಗಳು ಜ್ಞಾನ ದೇಗುಲಗಳಿದ್ದಂತೆ ವಿದ್ಯಾರ್ಥಿಗಳು ಆತ್ಯಂತ ಗೌರವ, ಶ್ರದ್ದೆಯಿಂದ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿ ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿ, ಸಮಾಜದ ಆಸ್ತಿಯಾಗಿ ಯುವಕರು ಹೊರಹೊಮ್ಮಬೇಕು ಅಗ ಅವರ ಬದುಕು ಕೂಡ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಆಭಿಷೇಕ್ ಮಾತನಾಡಿ, ಕಲಿಕಾ ಹಂತಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ನಿರ್ದೀಷ್ಟ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಿದಾಗ ಯಶಸ್ಸು ತಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದ ಕಡೆಗೆ ಗಮನಹರಿಸಿ ಶ್ರಮಪಟ್ಟು ವ್ಯಾಸಂಗ ಮಾಡಬೇಕು ಎಂದರು.
ಡಾ.ಧನಂಜಯ ಬಿ.ಜಿ.ಡಿ.ಹನುಮಂತಪ್ಪ, ಡಾ.ಆಮೂಲ್ಯ ಆರ್. ಎಚ್.ಹಾಗೂ ಡಾ.ಸಮರ್ಥರಾಮ್ ಬಿ.ಎನ್. ಅವರ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು, ಇದೇ ವೇಳೆ ಕ್ರೀಡಾ ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,
ಈ ವೇಳೆ ಹಿರಿಯ ಉಪನ್ಯಾಸಕ ಡಿ.ಸಿ.ಪಾಟೀಲ, ಉಪನ್ಯಾಸಕ ಬೆಳ್ಳುಳ್ಳಿ ಕೊಟ್ರೇಶ್, ಗ್ರಂಥಪಾಲಕ ನಾಗರಾಜ್ ಡಾ. ಹರೀಶ್ ದೈಹಿಕ ಶಿಕ್ಷಣಾಧಿಕಾರಿ ಹರಿಶ್ ಹಾಗೂ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.