ಶಿವಮೊಗ್ಗ: ಎಲ್ಲ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಗುರಿ, ಕನಸು ಮತ್ತು ಪ್ರತಿಭೆಗಳು ಇರುತ್ತವೆ. ಸಮರ್ಪಕವಾದ ಯೋಜನೆ ರೂಪಿಸಿಕೊಂಡು ಅವುಗಳನ್ನು ಸಾಧಿಸಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದರು.
ವಿದ್ಯಾರ್ಥಿಗಳಿಗೆ ಈಗ ಗುರು ಇದ್ದಾರೆ. ತಮ್ಮದೇ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವೆಡೆ ಗಮನ ಹರಿಸಬೇಕು. ತಂದೆ ತಾಯಿಗಳು, ಶಿಕ್ಷಕರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಕನಸು ಕಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಹೆಮ್ಮೆ ಪಡುವಂತಹ ಸಾಧನೆ ಮಾಡಿರಿ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಕೃಷಿಯಲ್ಲಿ ಸಹ ಉತ್ತಮ ಸಾಧನೆ ತೋರಬಹುದು. ವಿದ್ಯಾರ್ಥಿಗಳು ತಮ್ಮ ಕನಸು ಮತ್ತು ಗುರಿ ಸಾಧಿಸಲು ದೃಢ ಹೆಜ್ಜೆಗಳನ್ನು ಇಡಬೇಕು ಎಂದು ತಿಳಿಸಿದರು.
ಚಲನಚಿತ್ರ ನಟ ಭದ್ರಾವತಿಯ ದಿಲೀಪ್ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಮುಖ್ಯ. ಆದರೆ ಪ್ರತಿಭೆ ಅನಾವರಣ ಸಹ ಬಹಳ ಮುಖ್ಯ. ನಮ್ಮನ್ನು ನಾವು ಸಮಾಜದಲ್ಲಿ ಒಂದಿಲ್ಲೊಂದು ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹಗಲು ರಾತ್ರಿ ಶ್ರಮಿಸಬೇಕು. ನಮ್ಮ ಕನಸು, ಗುರಿ ತಲುಪುವವರೆಗೆ ನಿಲ್ಲಬಾರದು ಎಂದು ಕರೆ ನೀಡಿದರು.ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಕೃಷಿ ಮಾಡಬಹುದು ಎಂದು ತಾವು ನೆದರ್‌ಲ್ಯಾಂಡ್‌ನಲ್ಲಿ ಕಂಡ ಮಾದರಿ ಕೃಷಿ ಬಗ್ಗೆ ಉಲ್ಲೇಖಿಸಿದರು.
ಕೃಷಿ ಉದ್ದಿಮೆದಾರ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಬಿ.ಕೆ.ಕುಮಾರಸ್ವಾಮಿ ಮಾತನಾಡಿ, ಹಿಂದೆಲ್ಲ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹ ಬಹಳ ಇತ್ತು. ಈಗಲೂ ಅದು ಕಡಿಮೆ ಆಗಬಾರದು. ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ದೂರ ಇದ್ದು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸು ಹಾಗೂ ದೇಹವನ್ನು ಸದೃಢಗೊಳಿಸುತ್ತದೆ ಜೊತೆಗೆ ಸಾಧನೆಗೆ ಸಹಕಾರಿಯಾಗಿದೆ. ಆದ್ದರಿಂದ ನಿರ್ಲಕ್ಷ್ಯ ವಹಿಸದೇ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಎಲ್ಲರಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ವಿಶ್ವವಿದ್ಯಾಲಯ ಎಲ್ಲ ವಿಭಾಗಗಳಲ್ಲಿ ಜಾಗರೂಕತೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಶ್ವವಿದ್ಯಾಲಯಕ್ಕೆ ಕೃಷಿಕರು ಮತ್ತ ವಿದ್ಯಾರ್ಥಿಗಳು ಮುಖ್ಯ ಅಂಗವಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರುವುದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.