ಯುವನಿಧಿ ಯೋಜನೆ ಕಾರ್ಯಕ್ರಮ ಯಶಸ್ವಿಗೆ ಸಕಲ ಸಿದ್ಧತೆ ನಡೆಸಿ

KannadaprabhaNewsNetwork |  
Published : Jan 04, 2024, 01:45 AM IST
ಪೋಟೋ: 3ಎಸ್‌ಎಂಜಿಕೆಪಿ02ಶಿವಮೊಗ್ಗ ಜಿಲ್ಲಾಡಳಿತ ಸಭಾಂಗಣದಲ್ಲಿ ಬುಧವಾರ ಯುವನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತಾನು ಭರವಸೆ ನೀಡಿದಂತೆ ಐದೂ ಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದು, ಕಡೇಯ ಹಾಗೂ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲಿ ಅದ್ಧೂರಿ ಚಾಲನೆ ನೀಡಲು ಸಜ್ಜಾಗಿದೆ. ಬುಧವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಸಹ ಶಿವಮೊಗ್ಗದಲ್ಲಿ ಸಕಲ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡಿಪ್ಲೊಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಜ.12ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಚಾಲನೆ ನೀಡಲಾಗುತ್ತಿದ್ದು, ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಸಭಾಂಗಣದಲ್ಲಿ ಬುಧವಾರ ಯುವನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮ ಅಂಗವಾಗಿ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿ ಯುವಜನರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾರಂಭಕ್ಕೆ ಬರುವವರಿಗೆ ಆಸನ ವ್ಯವಸ್ಥೆ, ವಾಹನ ನಿಲುಗಡೆ, ಊಟೋಪಹಾರ ಹಾಗೂ ಮೂಲಭೂತ ವ್ಯವಸ್ಥೆ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

1000ಕ್ಕೂ ಹೆಚ್ಚು ಬಸ್‌ ವ್ಯವಸ್ಥೆ:

ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವ ವಿದ್ಯಾರ್ಥಿಗಳನ್ನು ಸಮಾರಂಭ ಸ್ಥಳಕ್ಕೆ ಕರೆತರಲು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಒಡೆತನದ 1000 ಬಸ್ಸುಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳು ಹಾಗೂ ಅಂತಿಮ ವರ್ಷದ ಸೆಮಿಸ್ಟರ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಡಿಪ್ಲೊಮಾ, ಪದವಿ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಹತ್ತಿರದ ತಾಲೂಕುಗಳ ವಿದ್ಯಾರ್ಥಿಗಳನ್ನು ಕರೆತರಲು ವಾಹನ ಸೌಲಭ್ಯ ಒದಗಿಸಲಾಗುವುದು. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಿಂದಲೇ ಬಹುಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಲು ಮೊಬೈಲ್‌ ಸಂದೇಶ:

ಈಗಾಗಲೇ ಯುವನಿಧಿ ಯೋಜನೆಯ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ರಾಜ್ಯದ ಎಲ್ಲ ಫಲಾನುಭವಿಗಳಿಗೂ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮೊಬೈಲ್ ಸಂದೇಶ ಕಳುಹಿಸಲು ಉದ್ದೇಶಿಸಲಾಗಿದೆ. ವಿವಿಧ ಸ್ಥಳಗಳಿಂದ ಕಾರ್ಯಕ್ರಮಕ್ಕೆ ಹೊರಡುವ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಪ್ರತಿ ಬಸ್‌ವೊಂದಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ನಿಯೋಜಿತ ಅಧಿಕಾರಿ-ಸಿಬ್ಬಂದಿಯ ಯೋಗಕ್ಷೇಮ ಮತ್ತು ಜವಾಬ್ದಾರಿ ತೆಗೆದುಕೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮದ ಅಂತಿಮ ಸ್ವರೂಪ ಮತ್ತು ಮೇಲ್ವಿಚಾರಣೆಗಾಗಿ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ, ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಬೇಳೂರು ಗೋಪಾಲಕೃಷ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಉಮಾ ಮಹದೇವನ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಆಯುಕ್ತೆ ಡಾ. ಆರ್‌.ರಾಗಪ್ರಿಯಾ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಮತ್ತಿತರರು ಇದ್ದರು.

- - - -3ಎಸ್‌ಎಂಜಿಕೆಪಿ02:

ಪೂರ್ವಸಿದ್ಧತಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ