ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂಧತ್ವ ಮುಕ್ತ ಶಿವಮೊಗ್ಗ-2024 ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಜಿ.ಪಂ ಸಿಇಒ ರವರು ಅಂಧತ್ವ ಮುಕ್ತ ಶಿವಮೊಗ್ಗದಂತಹ ಉತ್ತಮ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಎಲ್ಲರೂ ಸಹಕರಿಸ ಬೇಕು. ಅಂಧತ್ವಕ್ಕೆ ಕಾರಣವಾಗುವ ಅಂಶಗಳು, ಅದರ ನಿವಾರಣೆಗೆ ಅಗತ್ಯವಾದ ಚಿಕಿತ್ಸೆ, ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಹಣಕಾಸು ಹಾಗೂ ಕಾರ್ಯಕ್ರಮದ ರೂಪುರೇಷೆ ಕುರಿತು ಅಚ್ಚುಕಟ್ಟಾಗಿ ಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಮಾತನಾಡಿ, ಕೆಲವು ಜಿಲ್ಲೆಗಳಲ್ಲಿ ಆಶಾಕಿರಣ ಎಂಬ ಕಾರ್ಯಕ್ರಮದಡಿ ಅಂಧತ್ವ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಅಂಧತ್ವ ಮುಕ್ತ ಶಿವಮೊಗ್ಗ ಎಂಬ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.ಈ ಕಾರ್ಯಕ್ರಮದಡಿ ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಕಂಡು ಬರುವ ಕಣ್ಣಿನ ದೋಷಗಳು, ಕಣ್ಣಿನ ಪೊರೆ, ಒಡಚುಗಣ್ಣು, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪಥಿ ಮತ್ತು ಇತರೆ ಕಣ್ಣಿನ ದೋಷಗಳನ್ನು ಗುರುತಿಸಿ ಕನ್ನಡಕ ನೀಡುವುದು, ಕಣ್ಣಿನ ಪೊರೆ ಶಸ್ತçಚಿಕಿತ್ಸೆ ಹಾಗೂ ಹೆಚ್ಚಿನ ತೊಂದರೆ ಇದ್ದರೆ ಉನ್ನತ ಆರೋಗ್ಯ ಕೇಂದ್ರಗಳಿಗೆ ರೆಫರ್ ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಡಿ ಪ್ರಾಥಮಿಕ ತಪಾಸಣೆ, ಮಾಧ್ಯಮಿಕ ತಪಾಸಣೆ ಮತ್ತು ಉನ್ನತ ಆರೋಗ್ಯ ಕೇಂದ್ರಕ್ಕೆ ರೆಫರ್ ಮಾಡುವ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಕಣ್ಣಿನ ತೊಂದರೆ ಬಗ್ಗೆ ಪರಿಶೀಲಿಸಿ ವರದಿ ನೀಡುವರು. ನಂತರ ಆಶಾ ಬ್ಲಾಕ್‌ಗಳಲ್ಲಿ ವೈದ್ಯರು ತಪಾಸಣೆ ನಡೆಸಿ, ಕನ್ನಡಕ ಅಗತ್ಯವಿರುವವರಿಗೆ ಕನ್ನಡಕ ವಿತರಣೆ ಮಾಡುವರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಉನ್ನತ ಆರೋಗ್ಯ ಕೇಂದ್ರಕ್ಕೆ ರೆಫರ್ ಮಾಡಲಾಗುವುದು ಎಂದು ಜಿಪಂ ಸಿಇಒ ಎನ್.ಹೇಮಂತ್ ವಿವರಿಸಿದರು.
ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಕಿರಣ್ ಮಾತನಾಡಿ, 2024 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 15813 ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆದಿದೆ. ಗ್ರಾಮೀಣ ಭಾಗ ಮತ್ತು ಮಹಿಳೆಯರಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಿವೆ. ಈ ಕಾರ್ಯಕ್ರಮದಲ್ಲಿ ಕಣ್ಣಿನ ಪೊರೆ, ಗ್ಲುಕೊಮಾ, ಸಕ್ಕರೆ ಖಾಯಿಲೆ ರೆಟಿನೊಪತಿ, ಮಕ್ಕಳಲ್ಲಿ ಕಣ್ಣಿನ ತೊಂದರೆಗಳು, ಒಡಚುಗಣ್ಣು, ಗ್ಲುಕೊಮಾ, ಕಾನ್‌ಜೆನಿಟಲ್ ಟೋಸಿಸ್, ಇತರೆ ಕಣ್ಣಿನ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಡಿಎಚ್‌ಒ ಡಾ.ನಟರಾಜ್, ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಐಎಂಎ ಅಧ್ಯಕ್ಷ ಡಾ.ಶ್ರೀಧರ್, ತಾಲ್ಲೂಕು ವೈದ್ಯಾಧಿಕಾರಿಗಳು, ಶಂಕರ, ಸುಬ್ಬಯ್ಯ, ಮಣಿಪಾಲ ಆಸ್ಪತ್ರೆ ಅಧಿಕಾರಿಗಳು, ವಿವಿಧ ಎನ್‌ಜಿಓ ಪದಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.