ಕನ್ನಡಪ್ರಭ ವಾರ್ತೆ ಹಳೇಬೀಡು
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯದಲ್ಲಿ ತಾಲೂಕು ಆರೋಗ್ಯ ಇಲಾಖೆ ಬೇಲೂರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಸಮಸ್ಯೆಗಳ ಆರಂಭಿಕ ಲಕ್ಷಣಗಳ ಗುರುತಿಸುವಿಕೆ, ಒತ್ತಡ ನಿರ್ವಹಣೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಜೊತೆಗೆ ಮದ್ಯಪಾನ, ಧೂಮಪಾನ, ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆರೋಗ್ಯದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಾದಕ ವಸ್ತುಗಳ ಬಳಕೆಯಿಂದ ಉಂಟಾಗಬಹುದಾದ ಅವಲಂಬನೆ, ಖಿನ್ನತೆ, ಆತಂಕ, ಕುಟುಂಬದ ಸಮಸ್ಯೆಗಳು ಮತ್ತು ಸಾಮಾಜಿಕ ತೊಂದರೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಬೇಲೂರು ತಾಲ್ಲೂಕು ಮನೋಶಾಸ್ತ್ರಜ್ಞೆ ತನುಶ್ರೀ ಮಾತನಾಡುತ್ತ ಮಾನಸಿಕ ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳು ಮತ್ತು ಕಳಂಕವನ್ನು ನಿವಾರಿಸಿ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಬಿ.ಕೆ. ಶ್ರೀನಿವಾಸ್ ವಹಿಸಿ ಮಾತನಾಡುತ್ತ ನಮ್ಮ ಜೀವನದಲ್ಲಿ ಗುರಿ ಸಾಧನೆಗೆ ನಾವು ಹೊರ ಜಗತ್ತಿನಿಂದ ಎಷ್ಟು ಕಲಿಯುತ್ತೇವೋ, ಅಷ್ಟೇ ಅಂತಃಪ್ರಜ್ಞೆಯ ಮೂಲಕವೂ ಕಲಿಯುವುದಿದೆ. ಆದರೆ ಈಗಿನ ವೇಗದ ಬದುಕಿನಲ್ಲಿ ನಾವು ನಮಗೋಸ್ಕರ ಸಾಕಷ್ಟು ಸಮಯವನ್ನು ಕೊಡುವುದೇ ಇಲ್ಲ. ನಮ್ಮೊಳಗಿರುವ ಏರುಪೇರುಗಳನ್ನು ಗಮನಿಸುವುದೇ ಇಲ್ಲ. ಅದು ತಾರಕಕ್ಕೇರಿದ ಮೇಲೆ ಸಮಸ್ಯೆಯ ಅರಿವಾಗುತ್ತದೆ. ಆದರೆ ಅಷ್ಟು ಹೊತ್ತಿಗೆ ತಡವಾಗಿರುತ್ತದೆ.ಮಾನಸಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದಕ್ಕೆ ಅನೇಕ ಗಂಟೆಗಳನ್ನು ವಿನಿಯೋಗಿಸುವ ಅಗತ್ಯವಿಲ್ಲ. ನಿತ್ಯವೂ ನಮ್ಮ ಯೋಚನೆಗಳು, ಭಾವನೆಗಳು ಹಾಗೂ ವರ್ತನೆಗಳು ಆತ್ಮಾವಲೋಕನ ಮಾಡಬೇಕು. ಆವಾಗ ನಮ್ಮೊಳಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅವುಗಳು ಆರಂಭದಲ್ಲೇ ಗುರುತಿಸಲ್ಪಡುತ್ತವೆ. ತನ್ಮೂಲಕ ಅವುಗಳ ತಿದ್ದುಪಡಿಯೂ ಸುಲಭ ಸಾಧ್ಯವಾಗುತ್ತದೆ. ಇಂದಿನಿಂದ ಎಲ್ಲರೂ ತಮಗೋಸ್ಕರ ಇಡೀ ದಿನದಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಪ್ರಾಣಯಾಮ, ಧ್ಯಾನಕ್ಕೆ ಮೀಸಲಿಟ್ಟರೆ ನಾವು ಹಿಂದಿನ ದಿನಕ್ಕಿಂತ ಹೆಚ್ಚು ಉತ್ತಮರಾಗಬಹುದು. ಈ ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಾರ್ಯಕರ್ತರಾದ ಮನೋಜ್, ಹಿರಿಯ ಶ್ರೇಣಿ ಗ್ರಂಥಪಾಲಕ ಡಾ. ಕೆ.ಎಸ್, ಮನೋಜ್ ಕುಮಾರ್ ಸಹಾಯಕ ಪ್ರಾಧ್ಯಾಪಕರಾದ ಡಾ. ತಿಮ್ಮನಾಯಕ ಕೆ.ಬಿ, ರೋವಿನ್ ಮಾರ್ಟೀಸ್, ಸಮುದಾಯ ಆರೋಗ್ಯ ಕಾರ್ಯಕರ್ತರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಫೋಟೋ:
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.