ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದ ಬೆನ್ನೆಲುಬಾಗಿರುವ ರೈತರಿಗೆ ಹೆಚ್ಚಿನ ಸಹಕಾರ ಮತ್ತು ಸುಸ್ತಿದಾರರಿಗೆ ಸಾಲದ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಎಸ್.ಪಾಟೀಲ ಕರೆ ನೀಡಿದರು.ನಗರದ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಇಲಾಖೆ ಆಶ್ರಯದಲ್ಲಿ ವಿಜಯಪುರ ಹಾಗೂ ಬಸವನ ಬಾಗೇವಾಡಿ ತಾಲೂಕಿನ ವಿವಿಧೋದ್ದೇಶ ಪಿಕೆಪಿಎಸ್ ಸಿಇಒಗಳಿಗಾಗಿ ನಡೆದ ಕಂಪ್ಯೂಟರ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ಸಹಕಾರ ಸಂಘಗಳಿಂದ ದೊರಕುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕು. ಸಾಲ ಸೌಲಭ್ಯ, ಮರುಪಾವತಿ ಹೀಗೆ ಎಲ್ಲ ವಿಷಯಗಳಲ್ಲಿಯೂ ಮಾಹಿತಿ ನೀಡಬೇಕು. ಗ್ರಾಮೀಣ ಭಾಗದ ಜನತೆಗೆ ಸಹಕಾರ ಸಂಘಗಳಿಂದ ಹೆಚ್ಚಿನ ಸೌಲಭ್ಯಗಳು ದೊರೆಯುವಂತೆ ಕಾರ್ಯನಿರ್ವಹಿಸಬೇಕು ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮನಗೂಳಿ ಮಾತನಾಡಿ, ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸಹಾಯ ಸಹಕಾರ ನೀಡಬೇಕು. ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ. ಸಿಬ್ಬಂದಿಗೆ ಹೊಸ ಕೌಶಲ್ಯಗಳನ್ನು ಬೋಧಿಸುವ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವೆ ಸಲ್ಲಿಸುವ ಕಾರ್ಯ ನಡೆಯಬೇಕು ಎಂದರು.
ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್.ಎಂ.ತೋಟದ ಮಾತನಾಡಿ, ಕೇಂದ್ರ ಸರ್ಕಾರವು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಿಗೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ನೀಡುತ್ತಿದೆ. ಪಿಕೆಪಿಎಸ್‌ಗಳು ಈ ಸೌಲಭ್ಯದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಈ ವೇಳೆ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಶಿವನಗೌಡ ಬಿರಾದಾರ, ನಿಂಗಪ್ಪ ನಾವಿ, ಸಹಕಾರ ಸಂಘಗಳ ಪ್ರಭಾರ ಉಪ ನಿಬಂಧಕರಾದ ಎಸ್.ಕೆ.ಭಾಗ್ಯಶ್ರೀ, ವಿಜಯಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚೇತನ ಭಾವಿಕಟ್ಟಿ, ಶ್ರೀಶೈಲ ಹಂಗರಗಿ, ಎಸ್.ಡಿ.ಮನಗೂಳಿ, ಶ್ರೀಧರ ರತ್ನಾಕರ, ಸವಿತಾ ಬಿಸನಾಳ ಉಪಸ್ಥಿತರಿದ್ದರು.