
ಯಲ್ಲಾಪುರ: ಪರಿಶಿಷ್ಟ ಪಂಗಡದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಸಮಸ್ಯೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಪಂ ಸಭಾಭವನದಲ್ಲಿ ಸಭೆ ನಡೆಯಿತು.
ಕೊರೋನ ನಂತರ ಕೆಳಾಸೆಗೆ ಬಸ್ ಓಡಾಟ ನಿಂತಿದೆ. ಪ್ರತಿನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು ೬ ಕಿ.ಮೀ. ನಡೆದು ಬರಬೇಕು. ರಸ್ತೆಯೂ ಹದಗೆಟ್ಟಿದ್ದು, ದುರಸ್ತಿಗೆ ಕ್ರಮ ಆಗಿಲ್ಲ ಎಂದು ಕೆಳಾಸೆ ಭಾಗದ ಸಿದ್ದಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಟಿ ಸಮುದಾಯದವರಿಗಾಗಿ ಸರ್ಕಾರದಿಂದ ನೀಡುವ ಸಮುದಾಯ ಭವನ ಕೇವಲ ಹೆಸರಿಗೆ ಮಾತ್ರ ಮಂಜೂರಿಯಾಗುತ್ತಿದೆ. ಸಮುದಾಯದವರ ಬಳಕೆಗೆ ಸಿಗುತ್ತಿಲ್ಲ ಎಂದು ಕಿರವತ್ತಿಯ ಕಲ್ಲಪ್ಪ ಹೋಳಿ ದೂರಿದರು.ಸಭೆಯಲ್ಲಿ ಹೆಚ್ಚಿನವರು ತಮ್ಮ ವೈಯಕ್ತಿಕ ಸಮಸ್ಯೆಗಳ ಕುರಿತಾಗಿಯೇ ಪ್ರಸ್ತಾಪಿಸಿದರೆ ಹೊರತು, ಸಾಮೂಹಿಕ ವಿಚಾರದ ಕುರಿತು ವಿಶೇಷ ಗಮನ ಸೆಲೆಯಲಿಲ್ಲ. ಅರಣ್ಯ ಅತಿಕ್ರಮಣ, ವಸತಿ ಯೋಜನೆಯ ಮನೆ ಮಂಜೂರಾತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ತಾಪಂ ಇಒ ರಾಜೇಶ ಧನವಾಡಕರ್, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.