ಶಾಲೆಗಳಲ್ಲಿ ಮಾನಸಿಕ ತಜ್ಞರ ನೇಮಕ ಕಡ್ಡಾಯಗೊಳಿಸಿ

KannadaprabhaNewsNetwork |  
Published : Dec 13, 2025, 01:45 AM IST
12ಕೆಪಿಎಸ್ ಎಂಜಿ 11ಶಿವಮೊಗ್ಗದಲ್ಲಿ ಮಾನಸಿಕ ತಜ್ಞ ಡಾ. ಅರವಿಂದ್ ಅವರು ಮಾಧ್ಯಮ ಸಂವಾದದಲ್ಲಿ ಭಾಗಿಯಾದರು. | Kannada Prabha

ಸಾರಾಂಶ

ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ತಜ್ಞರ ನೇಮಕವನ್ನು ಕಡ್ಡಾಯಗೊಳಿಸಬೇಕು ಎಂದು ಹಿರಿಯ ಮಾನಸಿಕ ತಜ್ಞ ಡಾ.ಅರವಿಂದ ತಿಮ್ಮಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ತಜ್ಞರ ನೇಮಕವನ್ನು ಕಡ್ಡಾಯಗೊಳಿಸಬೇಕು ಎಂದು ಹಿರಿಯ ಮಾನಸಿಕ ತಜ್ಞ ಡಾ.ಅರವಿಂದ ತಿಮ್ಮಯ್ಯ ಅಭಿಪ್ರಾಯಪಟ್ಟರು.ಇತ್ತೀಚೆಗೆ ನಗರದಲ್ಲಿ ವೈದ್ಯರೊಬ್ಬರ ಕುಟುಂಬದಲ್ಲಿ ನಡೆದ ಇಬ್ಬರ ಆತ್ಮಹತ್ಯೆ ಮತ್ತು ಅದೇ ಕುಟುಂಬದಲ್ಲಿ ಕಳೆದ ಹತ್ತು ವರ್ಷಗಳಿಂದೀಚೆ ಇನ್ನಿಬ್ಬರ ಆತ್ಮಹತ್ಯೆಯ ಸಂಬಂಧ ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ರಾಜ್ಯದಲ್ಲಿನ ಮಾನಸಿಕ ತಜ್ಞರ ಅಸೋಸಿಯೇಶನ್ ಕೂಡ ಈ ಸಂಬಂಧ ಸರ್ಕಾರದ ಜೊತೆ ಮಾತನಾಡುತ್ತಿದೆ. ಎಳೆಯ ವಯಸ್ಸಿನಲ್ಲಿ ಮಕ್ಕಳ ಮಾನಸಿಕ ಸ್ವಾಸ್ಥ್ಯ ವ್ಯತ್ಯಾಸವಾಗದಂತೆ ಎಚ್ಚರ ವಹಿಸಬೇಕು. ಆ ವಯಸ್ಸಿನಲ್ಲಿ ಮನಸ್ಸಿನಲ್ಲಿ ಉಂಟಾಗಬಹುದಾದ ಒತ್ತಡ, ಗೊಂದಲ, ಹೆದರಿಕೆ, ಆತಂಕ ಇವೆಲ್ಲಕ್ಕೂ ಪರಿಹಾರ ಹುಡುಕಬೇಕು. ಅವರನ್ನು ಸಮಸ್ಯೆಯಿಂದ ಹೊರ ತರಬೇಕು ಎಂದು ಅವರು ಹೇಳಿದರು.

ಆದರೆ ಇದೇ ವೇಳೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಮಾನಸಿಕ ತಜ್ಞರ ಕೊರತೆಯಿದೆ. ಹೀಗಾಗಿ ಶಿಕ್ಷಕರು, ಆಶಾ ಕಾರ್ಯಕರ್ತರುಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.

ಇಂದಿನ ಶೈಕ್ಷಣಿಕ ವ್ಯವಸ್ಥೆಯ ಪಠ್ಯದಲ್ಲಿ ಮಾನಸಿಕ ವಿಷಯ ಕುರಿತು ಪಠ್ಯವೇ ಇಲ್ಲವಾಗಿದೆ. ಈಗಿರುವ ನೀತಿ ಪಾಠ, ದೈಹಿಕ ಶಿಕ್ಷಣ ಇವುಗಳ ಜೊತೆಗೆ ಮಾನಸಿಕ ವಿಷಯ ಸೇರಿಸಬೇಕೆಂದರು.

ವಿಶ್ವದಲ್ಲಿ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದರಲ್ಲಿ ಭಾರತದಲ್ಲಿಯೇ ಸುಮಾರು ಶೇ. 35-40 ರಷ್ಟಿರುವುದು ಅಘಾತಕಾರಿಯಾದ ವಿಷಯವಾಗಿದ್ದು, ಪ್ರತಿ 40ರಲ್ಲಿ ಒಬ್ಮ ಭಾರತೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ 40 ಸಾವಿರ ಗಂಡಸರು ಮತ್ತು 20 ಸಾವಿರ ಹೆಂಗಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಬಹುತೇಕರು ನೇಣು ಮತ್ತು ವಿಷ ಸೇವನೆಯ ಮೂಲಕ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗೆ ಆತ್ಮಹತ್ಯೆಯ ಮಾಡಿಕೊಳ್ಳುವ ಮನಃಸ್ಥಿತಿ ಮೂಡುವ ಹೊತ್ತಿನಲ್ಲಿ ಸರಿಯಾದ ಸಾಂತ್ವನ, ಪರಿಹಾರ, ಆಪ್ತಭಾವ ಸಿಕ್ಕಿದರೆ ಇದರಿಂದ ಹೊರ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ವರ್ತಮಾನದಲ್ಲಿ ಕೌಟುಂಬಿಕ ಸಮಸ್ಯೆ, ಚಿಕ್ಕ ಕುಟುಂಬ, ಒತ್ತಡದ ಬದುಕು, ಅಮಲು ಪದಾರ್ಥಗಳ ಸೇವನೆ, ಇನ್ನೊಬ್ಬರ ಜೊತೆಗೆ ಹೋಲಿಕೆ ಮಾಡಿಕೊಳ್ಳುವುದು, ವ್ಯಕ್ತಿತ್ವ ದೋಷ, ಖಿನ್ನತೆ ಇವೆಲ್ಲವೂ ಆತ್ಮಹತ್ಯೆಗೆ ಕಾರಣವಾಗುತ್ತಿದ್ದು, ಇವುಗಳಿಂದ ಹೊರ ಬರಬೇಕಿದೆ ಎಂದ ವ್ಯಾಖ್ಯಾನಿಸಿದರು.

ಇತ್ತೀಚಿನ ದಶಕದಲ್ಲಿ ರೈತರ ಆತ್ಮಹತ್ಯೆ ಕೂಡ ಹೆಚ್ಚಾಗುತ್ತಿದ್ದು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಇಂದು ಒತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ಒತ್ತಡದಿಂದ ಹೊರ ಬರಲು ಆತ್ಮಹತ್ಯೆ ಸುಲಭ ಮಾರ್ಗ ಎಂಬ ಭಾವ ಇಂತಹ ವರ್ಗದಲ್ಲಿ ಬಲಿಯುತ್ತಿದ್ದು, ಇದರ ಕುರಿತು ಕೂಡ ಗಮನಿಸಬೇಕು. ಸಮಸ್ಯೆಯನ್ನು ಎದುರಿಸುವ ಗಟ್ಟಿತನವನ್ನು ಅವರಲ್ಲಿ ಬೆಳೆಸಬೇಕು ಎಂದರು.

ಶಾಲೆಗಳಲ್ಲಿ ಮಾನಸಿಕ ಶಿಕ್ಷಣದ ಕುರಿತು ಸರ್ಕಾರದ ಒತ್ತಾಸೆ, ಕುಟುಂಬ ವ್ಯವಸ್ಥೆಯನ್ನು ಬಲಗೊಳಿಸುವುದು, ಮಕ್ಕಳಿಗೆ ಪೋಷಕರು ಕನಿಷ್ಠ ಸಮಯವನ್ನಾದರೂ ನೀಡುವುದು, ಬಾಡಿ ಶೇಮಿಂಗ್ ಇತ್ಯಾದಿ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗದಂತೆ ಅವರನ್ನು ಸದೃಢಗೊಳಿಸುವ ಪ್ರಯತ್ನ ಇತ್ಯಾದಿಗಳ ಮೂಲಕ ಜನರ, ಸಮಾಜದ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು. ಮಾನಸಿಕ ಆರೋಗ್ಯ ಎಂಬುದನ್ನು ಬೇರೆ ಅರ್ಥದಲ್ಲಿ ಪರಿಗಣಿಸದೆ ಇದೊಂದು ಅಗತ್ಯ ಚಿಕಿತ್ಸೆ ಎಂದು ಪರಿಗಣಿಸಿ ಆರಂಭದಲ್ಲಿಯೇ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ ಎಂದು ವಿಶ್ಲೇಷಿಸಿದರು.

ಡಾ.ಐಶ್ವರ್ಯ ಕೂಡ ಮಾನಸಿಕ ಸಮಸ್ಯೆ ಮತ್ತು ಪರಿಹಾರವನ್ನು ಕುರಿತು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ