ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಶೇ. 68.93 ರಷ್ಟು ಪ್ರಗತಿ
ಆಧಾರ್ ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡಿಗೆ ಜೋಡಿಸುವುದು ಕಡ್ಡಾಯ. ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಆಧಾರ್ - ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚಿಸಿದ್ದಾರೆ.
15 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳು ಆಧಾರ್ ಸೆಂಟರ್ ಗಳಿಗೆ ತೆರಳಿ ತಮ್ಮ ಬೆರಳಚ್ಚು ನೀಡಿ, ಆಧಾರ್ ಕಾರ್ಡ್ ಗಳನ್ನು ಸಕ್ರಿಯಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಧಾರ್ ನಿಷ್ಕ್ರಿಯಗೊಳ್ಳಲಿದ್ದು, ಪ್ರಸ್ತುತ 41,115 ಯುವಜನರ ಬಯೋಮೆಟ್ರಿಕ್ ನೀಡುವುದು ಬಾಕಿ ಇದೆ. ಇದರಿಂದ ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಬಯೋಮೆಟ್ರಿಕ್ ನೀಡಿ, ಅಪ್ಡೇಟ್ ಮಾಡಿಕೊಳ್ಳಬೇಕೆಂದರು.
ಅಂಗನವಾಡಿ ಕೇಂದ್ರಗಳಿಗೆ ಪೋಷಣ್ ಟ್ರ್ಯಾಕರ್ ಗೆ 45,832 ಮಕ್ಕಳು ದಾಖಲಾಗಿದ್ದು, ಅವರಲ್ಲಿ 33,425 ಮಕ್ಕಳಿಗೆ ಆಧಾರ್ ಕಾರ್ಡ್ ಹೊಂದಿದ್ದಾರೆ. ಬಾಕಿ ಉಳೀದ 11,947 ಮಕ್ಕಳ ಪೋಷಕರು ತಮ್ಮ ಮಕ್ಕಳ ಆಧಾರ್ ನೋಂದಣಿ ಮಾಡಿಸಬೇಕು ಎಂದರು.ಜನನ ಪ್ರಮಾಣ ಪತ್ರ ಹಾಗೂ ಶಾಲೆಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಹಿನ್ನೆಲೆ ಕೆಲವು ವಿದ್ಯಾರ್ಥಿಗಳು, ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರು ಹಾಗೂ ಹಾಸಿಗೆ ಹಿಡಿದ ಕೆಲವು ಅಂಗವಿಕರುಗಳು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಮಸ್ಯೆ ಉಂಟಾಗುತ್ತಿದೆ. ಇವುಗಳನ್ನು ಕೂಡಲೇ ಬಗೆಹರಿಸಿ ಅವರಿಗೂ ಸಹ ಆಧಾರ್ ಕಾರ್ಡ್ ಪಡೆಯಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.