ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ್ ಮಹೋತ್ಸವ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಭಕ್ತ ಸಮೂಹದ ಪ್ರೀತಿಯೇ ಮಠವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಮಠದ ವ್ಯವಸ್ಥೆ ಕಷ್ಟದಲ್ಲಿರುವಾಗ ಭಕ್ತರೆಲ್ಲರೂ ಸೇರಿ 1924ರಲ್ಲಿ ಹಿರಿಯ ಸ್ವಾಮೀಜಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರಿಗೆ ಹಾನಗಲ್ಲ ಕುಮಾರೇಶ್ವರ ಶಿವಯೋಗ ಮಂದಿರದಲ್ಲಿ ತರಬೇತಿ ನೀಡಿ ಈ ಮಠಕ್ಕೆ ಪೀಠಾಧಿಪತಿಗಳನ್ನಾಗಿ ಮಾಡಿದ್ದರು.
ನಂತರ 1985 ರಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಠದ ಪೀಠಾಧ್ಯಕ್ಷತೆ ವಹಿಸಿಕೊಂಡು ಹಗಲಿರುಳೆನ್ನದೇ ಎಲ್ಲರನ್ನೂ ಪ್ರೀತಿಸುತ್ತಾ ಮಠದ ಏಳ್ಗೆಯೊಂದಿಗೆ ಕನ್ನಡ ಮತ್ತು ಬಸವ ತತ್ವವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಅವರ 75ನೇ ಹುಟ್ಟುಹಬ್ಬವನ್ನು (ಅಮೃತ ಮಹೋತ್ಸವ) ವಿಜೃಂಭಣೆಯಿಂದ ಮಾಡಲು ಭಕ್ತರು ನಿರ್ಧರಿಸಿದ್ದಾರೆ ಎಂದು ಹೇಳಿದರು.ಚಿರಂತೇಶ್ವರ ವಿರಕ್ತಮಠ ಬಸವಬೆಳಗಿಯ ಶರಣಬಸವ ಮಹಾಸ್ವಾಮಿ ಸಮ್ಮುಖ ವಹಿಸಿ ಮಾತನಾಡಿ, ಈ ಭಾಗದಲ್ಲಿ ಕನ್ನಡಿಗರು ಇಷ್ಟೊಂದು ಸುಸಂಸ್ಕೃತವಾಗಿರಲು ಬಸವಾದಿ ಶರಣರೇ ಕಾರಣ. ವಿಶ್ವಕ್ಕೆ ಕನ್ನಡವನ್ನು ನೀಡಿದ ಕಲ್ಯಾಣನಾಡು, ನಿಜಾಮನ ಆಡಳಿತದಲ್ಲಿ, ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಮತ್ತೊಮ್ಮೆ ಕನ್ನಡವನ್ನು ಬೆಳೆಸಿದ ಶ್ರೇಯ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅವರ ಸಂಜಾತರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಜಗತ್ತಿನಾದ್ಯಂತ ಬಸವತತ್ವ ಪ್ರಚಾರ, ಪ್ರಸಾರ ಮಾಡುತ್ತ, ಬಸವ ತತ್ವ ಮಠಗಳ ಮಾತೆಯಾಗಿ ಮುನ್ನಡೆಯುತ್ತಿದ್ದಾರೆ.
ನಾರಂಜಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಹಾರಾಷ್ಟ್ರದ ಶಿವಾನಂದ ಹೈಬತಪೂರೆ ಮಾತನಾಡಿದರು.
ಈ ಭಾಗದಲ್ಲಿ ನಿರಂತರ ದಾಸೋಹ ನಡೆಸಬೇಕೆನ್ನುವುದು ನನ್ನ ಆಸೆ. ಹೀಗಾಗಿ ಸುಮಾರು 365 ಭಕ್ತರು ಒಂದೊಂದು ಲಕ್ಷ ರು. ದೇಣಿಗೆ ನೀಡಿದರೆ ವರ್ಷಪೂರ್ತಿ ಅವರ ಹೆಸರಿನಲ್ಲಿ ನಿರಂತರ ದಾಸೋಹ ನಡೆಸಲಾಗುವುದು. ಇದರಿಂದ ಸುದೈವಿ ಮಕ್ಕಳ ಅಮೃತ ಮಹೋತ್ಸವ ಮಾಡಿದಕ್ಕೂ ಸಾರ್ಥಕವಾಗುವುದು ಎಂದು ಹೇಳಿದರು.