ತುಮಕೂರು ರೈಲು ನಿಲ್ದಾಣ ಪುನರ್‌ ನವೀಕರಣ ಮಾಡಿ

KannadaprabhaNewsNetwork |  
Published : Jul 19, 2025, 01:00 AM IST
ಬೆಂಗಳೂರಿನಲ್ಲಿ ಸಭೆ | Kannada Prabha

ಸಾರಾಂಶ

ತುಮಕೂರು ರೈಲು ನಿಲ್ದಾಣದಲ್ಲಿ ವ್ಯವಸ್ಥಿತ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವನ್ನು ಅತಿ ಶೀಘ್ರವಾಗಿ ನಿರ್ಮಿಸಿಕೊಡಬೇಕೆಂದು ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷ, ನೈಋತ್ಯ ರೈಲ್ವೇ ಬೆಂಗಳೂರು ವಲಯದ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಕರಣಂ ರಮೇಶ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ರೈಲು ನಿಲ್ದಾಣದಲ್ಲಿ ವ್ಯವಸ್ಥಿತ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವನ್ನು ಅತಿ ಶೀಘ್ರವಾಗಿ ನಿರ್ಮಿಸಿಕೊಡಬೇಕೆಂದು ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷ, ನೈಋತ್ಯ ರೈಲ್ವೇ ಬೆಂಗಳೂರು ವಲಯದ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಕರಣಂ ರಮೇಶ್ ಆಗ್ರಹಿಸಿದರು.ಬೆಂಗಳೂರಿನ ಡಿಆರ್‌ಎಂ ಕಚೇರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿಲ್ದಾಣ ಪುನರ್ ನವೀಕರಣದ ಅಡಿಯಲ್ಲಿ ಬಹುಮಹಡಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಬಗ್ಗೆ ಕಳೆದ ಮೂರು ವರ್ಷಗಳಿಂದ ಭರವಸೆ ನೀಡಿಕೊಂಡು ಬರಲಾಗುತ್ತಿದೆ. ಇದೇ ಕಾರಣ ನೀಡಿ ಹಿಂದೆ ಇದ್ದ ವಿಸ್ತಾರವಾದ ವಾಹನ ನಿಲುಗಡೆ ಸ್ಥಾನವನ್ನು ಚಿಕ್ಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರಯಾಣಿಕರ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದಂತಾಗಿದೆ.ಇದರಿಂದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರು ದ್ವಿಚಕ್ರವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಸೂಕ್ತ ರಕ್ಷಣೆ ಇಲ್ಲವಾಗಿದೆ. ಪ್ರಯಾಣಿಕರ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆ ಮತ್ತು ಸವಾಲಾಗಿದ್ದು, ರೈಲು ನಿಲ್ದಾಣ ಪುನರ್ ನವೀಕರಣ ಕಾರ್ಯದಲ್ಲಿ ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಾಣ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕೆಂದು ಕರಣಂ ರಮೇಶ್ ಒತ್ತಾಯಿಸಿದರು.ಶಿವಮೊಗ್ಗ ಮತ್ತು ಚಾಮರಾಜನಗರದಿಂದ ತುಮಕೂರಿಗೆ ಬರುವ ರೈಲುಗಳು ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ತುಮಕೂರಿನಲ್ಲಿ ನಿಲ್ಲುವುದರಿಂದ ಇವುಗಳನ್ನು ತಿಪಟೂರು ಕಡೆಗೆ ಪ್ಯಾಸೆಂಜರ್ ರೈಲುಗಳನ್ನಾಗಿ ಓಡಿಸಿದರೆ ಆ ಭಾಗದ ನೂರಾರು ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ವಲಯ ವ್ಯವಸ್ಥಾಪಕ ಅಶುತೋಷ್ ಕೆ ಸಿಂಗ್ ಅವರು ಈ ಬಗ್ಗೆ ಇರುವ ಅವಕಾಶಗಳನ್ನು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಬಾಣಸವಾಡಿ-ಶಿವಮೊಗ್ಗ ಮೆಮು ರೈಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಈ ರೈಲಿಗೆ ಇನ್ನೂ ನಾಲ್ಕು ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಬೇಕೆಂಬ ಮನವಿಗೆ ಸ್ಪಂದಿಸಿದ ಡಿಆರ್‌ಎಂ, ಸಾಧ್ಯವಾದಷ್ಟು ಬೇಗ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುವುದು ಎಂದು ತಿಳಿಸಿದರು.ತುಮಕೂರಿನಿಂದ ವೈಟ್‌ಫೀಲ್ಡ್ ಅಥವಾ ಬಂಗಾರಪೇಟೆಗೆ ಹಾಗೂ ತುಮಕೂರು ಮೂಲಕ ಸಾಗುವಂತೆ ಕೆಂಗೇರಿಯಿಂದ ಶಿವಮೊಗ್ಗ ಕಡೆಗೆ ಮೆಮು ರೈಲುಗಳ ಸಂಚಾರ ಆರಂಭಿಸಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಅವರು, ಹೊಸ ಮೆಮು ರೈಲುಗಳ ಕೊರತೆ ಇದೆ. ಬೆಂಗಳೂರು ವಲಯಕ್ಕೆ ಹೆಚ್ಚಿನ ಮೆಮು ರೈಲುಗಳನ್ನು ಕೇಳಲಾಗಿದೆ. ಅವುಗಳು ದೊರೆತ ನಂತರ ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಡಿಆರ್‌ಎಂ ಅಶುತೋಷ್ ಕೆ. ಸಿಂಗ್ ಭರವಸೆ ನೀಡಿದರು.ಸಭೆಯ ನಂತರ ಸೀನಿಯರ್ ಡಿವಿಜನಲ್ ಆಪರೇಷನ್ ಮ್ಯಾನೇಜರ್ ಪ್ರಿಯಾ ಅವರೊಂದಿಗೆ ಚರ್ಚಿಸಿದ ಕರಣಂ ರಮೇಶ್, ಬೆಳಗ್ಗೆ ೮ ಗಂಟೆಗೆ ಬೆಂಗಳೂರಿಗೆ ತೆರಳುವ ರೈಲು ಆರಂಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗೂ ಹೋಗುತ್ತಿತ್ತು. ಆದರೆ ಕೋವಿಡ್ ನಂತರ ಆ ರೈಲನ್ನು ಯಶವಂತಪುರಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದ ಮೆಜೆಸ್ಟಿಕ್‌ವರೆಗೆ ತೆರಳಬೇಕಿರುವ ಸಾವಿರಾರು ಉದ್ಯೋಗಿ ರೈಲು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ರೈಲನ್ನು ಅದೇ ಸಮಯಕ್ಕೆ ಯಶವಂತಪುರಕ್ಕೆ ಬರುವ ಕೋಲಾರ – ಕೆಎಸ್‌ಆರ್ ರೈಲಿಗೆ ಲಿಂಕ್ ಮಾಡುವ ಮೂಲಕ ಪ್ರಯಾಣಿಕರಿಗೆ, ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್‌ಡಿಓಎಂ ಪ್ರಿಯಾ ಅವರು ಭರವಸೆ ನೀಡಿದರು. ಇದರೊಂದಿಗೆ ಇನ್ನೂ ಹಲವಾರು ಸೌಲಭ್ಯ, ಸೌಕರ್ಯಗಳ ಅನುಕೂಲಗಳ ಬಗ್ಗೆ ನಡೆಸಿದ ಚರ್ಚೆಗೆ ಅಧಿಕಾರಿ ಪೂರಕವಾಗಿ ಸ್ಪಂದಿಸಿದರು ಎಂದು ವೇದಿಕೆ ತಿಳಿಸಿದೆ.

ಪೋಟೋ ; ಬೆಂಗಳೂರಿನ ಡಿಆರ್‌ಎಂ ಕಚೇರಿಯಲ್ಲಿ ನೈಋತ್ಯ ರೈಲ್ವೇ ಬೆಂಗಳೂರು ವಲಯದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ