ಉತ್ತಮ ಶಿಕ್ಷಣ, ಸಂಸ್ಕಾರದಿಂದ ಬದುಕು ಸಾರ್ಥಕ ಪಡಿಸಿಕೊಳ್ಳಿ: ಕರಿಬಸವ ಸ್ವಾಮೀಜಿ

KannadaprabhaNewsNetwork |  
Published : Nov 13, 2024, 12:06 AM IST
೧೨ವೈಎಲ್‌ಬಿ೩:ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ನಿಡಶೇಷಿ ಮಠದ ಸಯುಂಕ್ತಾಶ್ರಯದಲ್ಲಿ ಸದ್ಬವನಾ ಯಾತ್ರೆ ಧಾರ್ಮಿಕ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಮಕ್ಕಳು ಉತ್ತಮ ಶಿಕ್ಷಣ, ಸಂಸ್ಕಾರ, ನಡೆ, ನುಡಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆದರ್ಶರಾದಾಗ ಬದುಕು ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಕ್ಕಳು ಉತ್ತಮ ಶಿಕ್ಷಣ, ಸಂಸ್ಕಾರ, ನಡೆ, ನುಡಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆದರ್ಶರಾದಾಗ ಬದುಕು ಸಾರ್ಥಕವಾಗುತ್ತದೆ ಎಂದು ನಿಡಶೇಷಿಯ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಲಿಂಗನಬಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ರಾತ್ರಿ ನಿಡಶೇಶಿ ಕರಿಬಸವಮಠ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ಸದ್ಭಾವನಾ ಯಾತ್ರೆ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಈಗಾಗಲೇ ನಾನು ೧೦ ಗ್ರಾಮಗಳಲ್ಲಿ ಪ್ರವಚನ ಹಮ್ಮಿಕೊಂಡಿದ್ದು, ಇದು ೧೧ನೇ ಗ್ರಾಮವಾಗಿದೆ. ಯುವಕರು ದುಶ್ಚಟಗಳ ದಾಸರಾಗಿ ಈ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ನೀವೆಲ್ಲ ದೇಶದ ಬಹುದೊಡ್ಡ ಆಸ್ತಿ ಎಂದರು.

ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕಾಗಿ ಏನನ್ನಾದರೂ ಒಳಿತನ್ನು ಮಾಡುವ ಗುಣ ಬೆಳೆಸಿಕೊಳ್ಳಬೇಕು. ಆದರೆ ಕೆಟ್ಟದನ್ನು ಎಂದೂ ಮಾಡಬಾರದು, ಬಯಸುಬಾರದು. ಅದು ನಮ್ಮನ್ನು ಸದಾ ಕಾಪಾಡುತ್ತದೆ. ದೇವರು ಸಿರಿಸಂಪತ್ತನ್ನು ಕೊಟ್ಟಾಗ ಕರೆದು ದಾನ, ಧರ್ಮ ಮಾಡುವ ಮನೋಭಾವನೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು, ಹೆತ್ತವರು, ಗುರು ಹಿರಿಯರನ್ನು ಗೌರವದಿಂದ ಕಾಣುವುದು ಇತರರಿಗೆ ಮಾದರಿಯಾಗಿರಬೇಕು ಅಂದಾಗ ಜೀವನ ಪಾವನವಾಗುತ್ತದೆ ಎಂದರು.

ಈ ಸಂದರ್ಭ ಧಾರವಾಡ ದುಮ್ಮಮಠದ ಸರ್ಪಭೂಷಣ, ಲಿಂಗನಬಂಡಿಯ ಉಳಿವೇಂದ್ರಸ್ವಾಮಿ ಮೌನೇಶ್ವರಮಠಮ ಶಂಭುಲಿಂಗಯ್ಯ ಹಿರೇಮಠ, ವಿಠಲ್ ಚಳಗೇರಿ, ರಾಮಣ್ಣ ಕಂದಕೂರು, ಗ್ರಾಮದ ಗುರು-ಹಿರಿಯರು, ಯುವಕರು, ಇತರರು ಇದ್ದರು.

ಲಿಂಗನಬಂಡಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ೭ ಗಂಟೆಗೆ ಜೋಳಿಗೆ ಹಿಡಿದು ಪಾದಯಾತ್ರೆ ಮಧ್ಯಾಹ್ನದವರೆಗೆ ನಡೆಯಿತು. ಗ್ರಾಮದಲ್ಲಿ ಜಾತಿಬೇಧ ಎನ್ನದೆ ಎಲ್ಲ ಸಮಾಜದ ಮನೆಗಳಿಗೆ ತೆರಳಿ ಅರಿವು ಮೂಡಿಸಿ, ದುಶ್ಚಟಕ್ಕೆ ಯಾರು ಅಂಟಿಕೊಳ್ಳಬೇಡಿ ಯುವಕರು ಒಳ್ಳೆ ಚಾರಿತ್ರ್ಯವುಳ್ಳರಾಗಬೇಕು ಎಂದು ಕರೆ ನೀಡಿದರು.

ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ:

ಇದರಿಂದ ಲಿಂಗನಬಂಡಿ ಗ್ರಾಮಸ್ಥರು ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲಿಸಿದರು. ಗ್ರಾಮಕ್ಕೆ ಸ್ವಾಮೀಜಿಗಳು ಆಗಮಿಸುತ್ತಿದ್ದಂತೆ ಮಹಿಳೆಯರು ಕುಂಭ ಕಳಸ, ಡೊಳ್ಳು ಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು