ಜೀವಂತ ರತಿ-ಮನ್ಮಥರನ್ನು ನಗಿಸಿ 13 ಲಕ್ಷ ಬಹುಮಾನ ಪಡೆಯಿರಿ

KannadaprabhaNewsNetwork |  
Published : Mar 01, 2026, 02:45 AM ISTUpdated : Mar 01, 2026, 08:30 AM IST
Holi

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮನುಷ್ಯ ಯಾಂತ್ರಿಕತೆ ಹಾಗೂ ಒತ್ತಡದ ಜೀವನಶೈಲಿಯಿಂದ ಬಳಲಿ ಬೆಂಡಾಗಿದ್ದು, ಅದನ್ನು ದೂರ ಮಾಡಿ ಶಾಂತಿ ನೆಮ್ಮದಿ ನೀಡಲು ನಗುವೊಂದೇ ಸೂಕ್ತ ಪರಿಹಾರವಾಗಿದೆ.  ಹೋಳಿ ಹಬ್ಬದ ಮುನ್ನಾದಿನ ಪ್ರತಿಷ್ಠಾಪಿಸಲಾಗುವ ಜೀವಂತ ರತಿ-ಮನ್ಮಥರ ನಗಿಸುವ ಕಾರ್ಯಕ್ರಮ ಬಹುವೈಶಿಷ್ಟ್ಯಪೂರ್ಣವಾಗಿದೆ.

ಬಸವರಾಜ ಸರೂರ

 ರಾಣಿಬೆನ್ನೂರು :  ಇತ್ತೀಚಿನ ದಿನಗಳಲ್ಲಿ ಮನುಷ್ಯ ಯಾಂತ್ರಿಕತೆ ಹಾಗೂ ಒತ್ತಡದ ಜೀವನಶೈಲಿಯಿಂದ ಬಳಲಿ ಬೆಂಡಾಗಿದ್ದು, ಅದನ್ನು ದೂರ ಮಾಡಿ ಶಾಂತಿ ನೆಮ್ಮದಿ ನೀಡಲು ನಗುವೊಂದೇ ಸೂಕ್ತ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಹಾವೇರಿ ಜಿಲ್ಲೆ ರಾಣಿಬೆನ್ನೂರು ನಗರದಲ್ಲಿ ಹೋಳಿ ಹಬ್ಬದ ಮುನ್ನಾದಿನ ಪ್ರತಿಷ್ಠಾಪಿಸಲಾಗುವ ಜೀವಂತ ರತಿ-ಮನ್ಮಥರ ನಗಿಸುವ ಕಾರ್ಯಕ್ರಮ ಬಹುವೈಶಿಷ್ಟ್ಯಪೂರ್ಣವಾಗಿದೆ. ಈ ಬಾರಿ ಮಾ. 3ರಂದು ಸಂಜೆ 6.30ರಿಂದ ರಾತ್ರಿ 12ರ ವರೆಗೆ ನಗರದ ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಭೀಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಶಕ್ತಿ ಯುವಕ ಸಂಘ ಹಾಗೂ ಜೆಬಿಸಿಸಿ ಯುವಕ ಮಂಡಳಿ ವತಿಯಿಂದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಜೀವಂತ ರತಿ ಮನ್ಮಥರನ್ನು ಕುಳ್ಳರಿಸಲಾಗುತ್ತದೆ.

ವೈವಿಧ್ಯಮಯ ಮಾತುಗಳು:

 ರತಿ ಮನ್ಮಥರನ್ನು ನಗಿಸಲು ಜನರು ಮಾಡುವ ಕಸರತ್ತುಗಳು ವೈಶಿಷ್ಟ್ಯಪೂರ್ಣವಾಗಿರುತ್ತವೆ. ಆದರೆ ಅವರ ಪ್ರಯತ್ನ ಹೊಳೆಯಲ್ಲಿ ನಿರರ್ಥಕವಾಗುತ್ತದೆಯೇ ಹೊರತು ನಗಿಸಲು ಸಾಧ್ಯವಾಗುವುದಿಲ್ಲ. ಕಾಮಣ್ಣಾ ಸ್ವಲ್ಪ ನಕ್ಕರ ನಗಪಾ, ಯಾತಕ್ಕ್ ಚಿಂತಿ ಮಾಡತಿ? ನಮ್ಮವರು ಟಿ20 ವಿಶ್ವಕಪ್ ಮತ್ತ್ ಗೆಲ್ಲೋ ಚಿಂತಿ ಐತ್ಯೇನ್? ಅದಕ್ಯಾಕ್ ತಲಿ ಕೆಡಿಸಿಕೊಂಡಿ, ಯವ್ವಾ ರತಿದೇವಿ ನೀನರ್ ಸ್ವಲ್ಪ ನಕ್ಕರ ನಗು, ಬಂಗಾರ ರೇಟ್ ಹೆಚ್ಚಾಗಿದ್ದಕ್ಕ್ ಚಿಂತಿ ಅಗೈತೇನು? ಎಂಬ ತರಹೇವಾರಿ ಮಾತುಗಳು ಇಲ್ಲಿಗೆ ಆಗಮಿಸುವ ಜನರಿಂದ ಕೇಳಿ ಬರುತ್ತವೆ. 

ನಗೆಪಾಟಲಿಗೆ ಈಡಾಗುವ ಜನತೆ: ರತಿ ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿಗೆ ಬರುವ ಜನ ತಾವೇ ನಗೆಪಾಟಲಿಗಿಡಾಗುವ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. ವಯಸ್ಸು ಹಾಗೂ ಲಿಂಗ ಭೇದವಿಲ್ಲದೆ ಅನೇಕರು ವಿಚಿತ್ರ ಹಾವಭಾವ ಕೂಡ ಪ್ರದರ್ಶಿಸುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಬಹುಮಾನ ಗೆಲ್ಲಲು ಪ್ರಯತ್ನ ಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ರತಿ ಮನ್ಮಥರು ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಪರಕಾಯ ಪ್ರವೇಶ ಮಾಡಿದಂತೆ ತಮ್ಮ ಪಾಡಿಗೆ ತಾವು ತದೇಕಚಿತ್ತದಿಂದ ಗಂಭೀರವದನರಾಗಿ ಕುಳಿತುಕೊಂಡಿರುತ್ತಾರೆ. 

ಜಾತ್ರೆಯ ಅನುಭವ: 

ಮಹಿಳೆಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಜೀವಂತ ರತಿ ಮನ್ಮಥರನ್ನು ನೋಡಲು ಸೇರಿರುತ್ತಾರೆ. ವಿವಿಧ ಪ್ರದೇಶಗಳ ಯುವಕರು ಹಲಗೆ ಬಾರಿಸುತ್ತ ಇಲ್ಲಿಗೆ ಬಂದು ಹೋಗುವುದನ್ನು ಕಂಡರೆ ಇಲ್ಲಿ ಒಂದು ಜಾತ್ರೆ ನಡೆದಿದೆಯೇನೋ ಎಂದೆನೆಸುತ್ತದೆ. ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.

ಹಾಗೆ ಉಳಿಯುತ್ತಿರುವ ಬಹುಮಾನ: 

ನಗಿಸಿದವರಿಗೆ ವಿವಿಧ ಸಂಘ ಸಂಸ್ಥೆಗಳು ಸುಮಾರು ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡುವುದಾಗಿ ತಿಳಿಸಿದರೂ ಸಹ ಕಳೆದ 67 ವರ್ಷಗಳಿಂದ ಯಾರೊಬ್ಬರೂ ಜೀವಂತ ರತಿ ಕಾಮಣ್ಣರನ್ನು ನಗಿಸಿದ ಉದಾಹರಣೆಗಳಿಲ್ಲ. (ಈ ಬಾರಿ ಬಹುಮಾನದ ಮೊತ್ತ 13 ಲಕ್ಷ: ಅಜ್ಜಪ್ಪ ಜಂಬಗಿ ಮೂರು ಲಕ್ಷ, ಎ.ಬಿ. ಪಾಟೀಲ, ಅನಿಲ ಸಿದ್ದಾಳಿ, ಕೊಟ್ರೇಶ ಕೆಂಚಪ್ಪನವರ, ಬಸವರಾಜ ರೊಡ್ಡನವರ, ಸಿದ್ದು ಚಿಕ್ಕಬಿದರಿ ತಲಾ ಒಂದು ಲಕ್ಷ, ಯುವರಾಜ ಬಾರಾಟಕ್ಕಿ, ಕುಮಾರ ಎಳೆಹೊಳಿ, ಪ್ರಭುಸ್ವಾಮಿ ಕರ್ಜಗಿಮಠ, ಶಿವರಾಜ ಬೇತೂರ, ಗಿರೀಶ ಅಡಕಿ, ಬಿ.ಎಂ.ತಾವರಗುಂದಿ, ಶಿವಕುಮಾರ ಹರ್ಕನಾಳ, ಪ್ರಶಾಂತ ಹಿತ್ತಲಮನಿ ತಲಾ 50 ಸಾವಿರ ರು. ಹಾಗೂ ಇತರರು ಒಂದು ಲಕ್ಷ ಒಟ್ಟು 13 ಲಕ್ಷ) ಜೀವಂತ ರತಿ, ಮನ್ಮಥರು ನಗದಿರುವುದು ದಾಖಲೆಯಾಗಿ ಮುಂದುವರೆದಿದೆ. ಇದರ ಮರ್ಮವನ್ನು ಅರಿಯಲು ಸ್ಥಳೀಯ ಜನತೆ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಜನ ಇಲ್ಲಿಗೆ ಆಗಮಿಸಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ. 

ಸೋಜಿಗದ ಸಂಗತಿ:

 ಕಳೆದ 27 ವರ್ಷಗಳಿಂದ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ 32 ವರ್ಷಗಳಿಂದ ರತಿ ವೇಷವನ್ನು ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿರುತ್ತಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿದ್ದು ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ನಗೆಯ ಲವಲೇಶವೂ ತಮ್ಮ ಹತ್ತಿರ ಸುಳಿಯದಂತೆ ಕುಳಿತುಕೊಳ್ಳುವ ರೀತಿ ಸಾರ್ವಜನಿಕರಿಗೆ ಕುತೂಹಲದ ಜತೆಗೆ ಸೋಜಿಗ ಉಂಟು ಮಾಡುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು
1ನೇ ತರಗತಿ ವಯೋಮಿತಿ ಸಡಿಲಿಕೆ 2026 - 27ಕ್ಕೆ ಮಾತ್ರ