ಕೊಪ್ಪಳ: ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಆ.1ರಂದು ಆಚರಿಸುವ ವ್ಯಸನ ಮುಕ್ತ ದಿನಾಚರಣೆಯನ್ನು ಜಿಲ್ಲಾ ಕೇಂದ್ರ ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಚ್ಚುಕಟ್ಟಾಗಿ ಆಚರಣೆ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದರು. ಶ್ರೀಗಳ ಜನ್ಮದಿನ ರಾಜ್ಯ ಸರ್ಕಾರವು ಪ್ರತಿ ವರ್ಷ ಆ.1ರಂದು ವ್ಯಸನ ಮುಕ್ತ ದಿನವನ್ನಾಗಿ ಆಚರಣೆ ಮಾಡುತ್ತಿದ್ದು,ಈ ದಿನಾಚರಣೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಬೇಕಿದೆ. ಹಾಗಾಗಿ ಜಿಲ್ಲಾ ಮಟ್ಟದ ವ್ಯಸನ ಮುಕ್ತ ದಿನಾಚರಣೆ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಬೇಕು ಎಂದರು.
ವ್ಯಸನ ಮುಕ್ತ ದಿನಾಚರಣೆ ಆ.1ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲು ಯೋಜಿಸಿದ್ದು, ವೇದಿಕೆಯ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಬೇಕು. ಕಾಲೇಜು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ನೋಡಿಕೊಳ್ಳಬೇಕು ಎಂದರು.ಡಾ. ಮಹಾಂತ ಶಿವಯೋಗಿಗಳ ವಿಚಾರಗಳ ಜತೆಗೆ ಮಧ್ಯಪಾನ, ಮಾದಕದ್ರವ್ಯ ಮತ್ತು ತಂಬಾಕು ಸೇವೆನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿ ಯುವಜನರಿಗೆ ತಿಳಿಸುವ ದಿಶೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿ ವಿಜೇತರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾಂತ ಶಿವಯೋಗಿಗಳ ಕುರಿತ ಉಪನ್ಯಾಸ ಏರ್ಪಡಿಸಲು ಜಾಗತಿಕ ಲಿಂಗಾಯತ ಮಹಾಸಭಾದ ಡಾ. ಸಂಗಮೇಶ ಕಲಹಾಳ ಸಭೆಗೆ ಸಲಹೆ ಮಾಡಿದರು.