ಸಂಕ್ರಾಂತಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸೂಚನೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ಬೆಟ್ಟದಲ್ಲಿ ಚಿಕ್ಕತೇರು ನಡೆಯುತ್ತದೆ. ಈ ಬಾರಿ ಜ. ೧೬ ರಂದು ತೇರು ನಡೆಯಲಿದೆ. ರಥರೋಹಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಇಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಸೂಚನೆ ನೀಡಿದರು.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗಣ್ಯರ ವಸತಿ ಗೃಹದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಟ್ಟದ ಜಾತ್ರೆಗೆ ಈ ಬಾರಿ ಕೆಎಸ್‌ಆರ್‌ಟಿಸಿಯಿಂದ ಒಟ್ಟು ೧೦೦ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರಲ್ಲಿ ಯಳಂದೂರು ಪಟ್ಟಣದಿಂದ, ಕೊಳ್ಳೇಗಾಲ ಮಾರ್ಗವಾಗಿ ಹಾಗೂ ಚಾಮರಾಜನಗರದಿಂದ ಬಸ್‌ಗಳನ್ನು ಓಡಿಸಲಾಗುವುದು. ಮೈಸೂರು, ಗುಂಡ್ಲುಪೇಟೆಯಿಂದಲೂ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು. ಇದರೊಂದಿಗೆ ನಾಲ್ಕು ಚಕ್ರದ ವಾಹನಗಳಲ್ಲಿ ಬರುವ ಭಕ್ತರು ಇವರಿಗೆ ನಿಗಧಿಯಾಗಿರು ಸ್ಥಳದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ದೇಗುಲಕ್ಕೆ ತೆರಳಲು ವಿಶೇಷ ಬಸ್‌ಗಳನ್ನು ಬಿಡಲಾಗುವುದು ಎಂದು ಮಾಹಿತಿ ನೀಡಿದರು.ಯಳಂದೂರುದಿಂದ ಬೆಟ್ಟಕ್ಕೆ ತೆರಳು ರಸ್ತೆ ಮಾರ್ಗ ಕಿರಿದಾಗಿದೆ. ರಸ್ತೆ ಬದಿ ಕೊರಕಲಾಗಿದೆ. ಇಲ್ಲಿಗೆ ಕಲ್ಲು ಹಾಗೂ ಮಣ್ಣನ್ನು ಹಾಕಿ ಪಿಚ್ಚಿಂಗ್ ಮಾಡಿಸಬೇಕು, ಈ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಮೊರಾರ್ಜಿ ವಸತಿ ಶಾಲೆಯ ರಸ್ತೆ ಮಾರ್ಗ ಕಾಮಗಾರಿ ಅಪೂರ್ಣಗೊಂಡಿದ್ದು ತಾತ್ಕಾಲಿಕವಾಗಿ ಶಾಸಕರ ಅನುದಾನದಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ರಸ್ತೆಯನ್ನು ಮೆಟ್ಲಿಂಗ್ ಮಾಡಲು ಸೂಚನೆ ನೀಡಿದರು.
ತೇರಿನ ನಿಮಿತ್ತ ಬೆಟ್ಟದಲ್ಲಿ ಜ. ೧೪ ರಿಂದ ೧೭ ರವರೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಬೇಕು. ಅಗ್ನಿ ಶಾಮಕ ಸಿಬ್ಬಂದಿ ತಮ್ಮ ವಾಹನದೊಂದಿಗೆ ಸನ್ನದ್ಧರಾಗಿರಬೇಕು, ಬರುವ ಭಕ್ತರಿಗೆ ತತ್ಕಾಲಿಕ ಶೌಚಗೃಹಗಳನ್ನು ನಿರ್ಮಿಸಬೇಕು, ಭಕ್ತರಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕು.
----