ದೊಡ್ಡಬಳ್ಳಾಪುರ: ತಾಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 57ರ ಜಮೀನು ಮಂಜೂರಾತಿಯಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿ ಆದೇಶ ಮಾಡುವ ಮೂಲಕ ಮತ್ತೆ ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಜಮೀನು ಮಂಜೂರಾತಿಗೆ ನಕಲಿ ದಾಖಲೆ ಸೃಷ್ಟಿಸಿದ ತಾಲೂಕು ಕಚೇರಿಯಲ್ಲಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಆಗ್ರಹಿಸಿದರು.
ಸೋಮೇಶ್ವರ ಕುಂಟೆ ಜಮೀನಿನ ಪಹಣಿಯಲ್ಲಿನ ವಿಸ್ತೀರ್ಣ ಕಾಲಂನಲ್ಲಿ ವಿಸ್ತೀರ್ಣವೇ ತೋರಿಸದಂತೆ ಮಾಡಲಾಗಿದೆ. ಆದರೆ, ಹಳೆಯ ದಾಖಲೆಗಳಲ್ಲಿ ಎಲ್ಲವೂ ಕಾನೂನು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಒತ್ತುವರಿ ತೆರವು ಆಗಿಲ್ಲ. ಈ ಸಂಬಂಧ ಕ್ರಮ ಕೈಗೊಳ್ಳದಿದ್ದರೆ ಇದೇ 26ರ ಗಣರಾಜ್ಯೋತ್ಸವ ಆಚರಣೆಯಂದು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ಪೊಲೀಸರಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ ಎಂದರು.
ತಾಲೂಕು ಕಚೇರಿ ಸಮೀಪದಲ್ಲೇ ರೋಜಿಪುರ ಸರ್ವೇ ನಂ.93ರಲ್ಲಿನ ಆಯಕಟ್ಟಿನ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆ ನಿರ್ಮಿಸುತ್ತಿರುವ ಹೊರತಾಗಿಯೂ, ತಾಲ್ಲೂಕು ಆಡಳಿತ ಕಣ್ಣುಮುಚ್ಚಿ ಕುಳಿತಿದೆ. ರೋಜಿಪುರದ ಕೈಲಾಸ ಮಠ ಸ್ಮಶಾನದ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದರ ವಿರುದ್ಧ ದೂರು ನೀಡಲಾಗಿದ್ದರೂ, ನಗರಸಭೆ ಆಡಳಿತ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದೆ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ರಮೇಶ್, ರಂಜಿತ್, ಕಾರ್ಯದರ್ಶಿ ಅರವಿಂದ್, ನರೇಂದ್ರ, ತಾಯೇಗೌಡ, ಪುನೀತ್ ಕುಮಾರ್, ವಿನಯ್ ಆರಾಧ್ಯ, ಪ್ರದೀಪ್ ಕುಮಾರ್, ಉದಯಕುಮಾರ, ಶಿವು ಇದ್ದರು.
3ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿದರು