ಕನ್ನಡಪ್ರಭ ವಾರ್ತೆ, ತುಮಕೂರು
ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್‌ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ರೀಡರ್ಸ್ ಆರ್ ಲೀಡರ್ಸ್’ ಎಂಬ ಘೋಷವಾಕ್ಯದ ಅಂತಾರಾಷ್ಟ್ರೀಯ ಗ್ರಂಥಪಾಲಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಓದಿನಿಂದ ಕೇವಲ ಜ್ಞಾನ ಮಾತ್ರವಲ್ಲ, ಗ್ರಹಿಕೆ, ಆಲೋಚನಾಶಕ್ತಿ ವೃದ್ಧಿಯಾಗುತ್ತದೆ. ಜೀವನ ಪರಿವರ್ತನೆಗೂ ಓದು ಕಾರಣವಾಗುತ್ತದೆ. ಗಾಂಧೀಜಿ, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹ ಅನೇಕರು ಪುಸ್ತಕಪ್ರೀತಿ ಬೆಳೆಸಿಕೊಂಡಿದ್ದರು. ಓದುವು ಜೀವನೋತ್ಕರ್ಷಕ್ಕೆ ಕಾರಣವಾಗುತ್ತದೆ. ಪುಸ್ತಕಗಳ ಓದಿನಿಂದ ನಾನು ಪರಿವರ್ತನಾದೆ, ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಓದುವಿಗೆ ಅಂತಹ ಪರಿವರ್ತನೆ ಮಾಡುವ ಶಕ್ತಿ ಇದೆ. ಪುಸ್ತಕಗಳು ಮನುಷ್ಯನ ಅತ್ತುತ್ತಮ ಸ್ನೇಹಿತರು ಎನ್ನುವ ಮಾತಿನಲ್ಲಿ ಅರ್ಥವಿದೆ. ಪುಸ್ತಕ ಓದುವ ಹವ್ಯಾವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.ಸಮಾರಂಭದ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಓದು ನಮ್ಮನ್ನು ವಿಕಸಿನಗೊಳಿಸುತ್ತದೆ. ಓದುವಿನಿಂದ ಗ್ರಹಿಕೆಯಿಂದ, ಸಂವಾದದಿಂದ ನಮ್ಮನ್ನು ನಾವು ಅರಳಿಸಿಕೊಳ್ಳಬಹುದು. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಬೇಕು, ಮನೆಗಳಲ್ಲಿ ಪುಸ್ತಕ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಜ್ಞಾನಕ್ಕಿಂಥಾ ದೊಡ್ಡದು ಜಗತ್ತಿನಲ್ಲಿ ಇನ್ನಾವುದೂ ಇಲ್ಲ. ಓದುವುದರಿಂದ ಜ್ಞಾನ ಸಂಪಾದಿಸಬಹುದು. ಪ್ರತಿ ಮನೆಯಲ್ಲೂ ಒಂದು ಗ್ರಂಥಾಲಯ ಇರಬೇಕು. ಓದುವ ಹವ್ಯಾಸ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕು. ಅಡುಗೆಮನೆ, ದೇವರಮನೆಯಂತೆ ಒಂದು ಪುಸ್ತಕಮನೆ ಎಲ್ಲರ ಮನೆಯಲ್ಲಿರಲಿ ಎಂದರು.
ಸುಮಾರು 20 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿರುವ ಪದ್ಮಶ್ರೀ ಪುರಸ್ಕೃತರಾದ ಪುಸ್ತಕ ಮನೆ ಅಂಕೇಗೌಡರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅಂಕೇಗೌಡರು, ಎಲ್ಲರೂ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು, ದಿನದಲ್ಲಿ ಕನಿಷ್ಠ 4 ಪುಟಗಳನ್ನಾದರೂ ಓದಬೇಕು. ಇದು ಜ್ಞಾನದ ಯುಗ ಜ್ಞಾನದಿಂದಲೇ ಬದುಕು ರೂಪಿಸಿಕೊಳ್ಳಬೇಕಾಗಿರುವುದರಿಂದ ಜ್ಞಾನವಂತರಾಗಲು ಓದಬೇಕು ಎಂದರು.
ಈ ವೇಳೆ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಬಿ.ಜಿ.ಕುಂಬಾರ, ಬೀದರ್ ವಿವಿ ಕುಲಪತಿ ಡಾ.ಬಿ.ಎಸ್.ಬಿರಾದಾರ, ಗ್ರಂಥಪಾಲಕರಾದ ಪ್ರೊ.ಎ.ವೈ.ಅಸುಂದಿ, ಪ್ರೊ.ಟಿ.ವಿ.ಕೆಂಪರಾಜು, ಪ್ರೊ.ಮುತ್ತಯ್ಯ ಕೊಗನೂರುಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.