ಕನ್ನಡಪ್ರಭ ವಾರ್ತೆ ಹುನಗುಂದ
ನಮ್ಮ ಮಕ್ಕಳಿಗೆ ಮತ್ತು ಮೊಮ್ಮಕಳಿಗೆ ಧರ್ಮಪಾಲನೆಯನ್ನು ಕಡ್ಡಾಯವಾಗಿ ಮಾಡಿದರೇ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಸೋಮವಾರ ನಡೆದ ಶ್ರಾವಣ ಮಾಸದ ವಚನ ದರ್ಶನ ಪ್ರವಚನ ಮಂಗಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುಗಳಿಂದ ಮಾತ್ರ ಧರ್ಮ ಉಳಿಸಲು ಸಾಧ್ಯವಿಲ್ಲ, ಭಕ್ತರು ಧರ್ಮವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕು ಎಂದರು.12ನೇ ಶತಮಾನದಲ್ಲಿ ಬಸವಣ್ಣನವರು ನಡೆದು ಬಂದ ಪಾರಂಪರಿಕ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿದು ಲಿಂಗಾಯತರು ಸಂಸ್ಕಾರ, ಸಂಸ್ಕೃತಿ ಜತೆಗೆ ಮಾನವೀಯತೆ ಕಲಿಸಿದ ಧರ್ಮಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಚಿತ್ತರಗಿ ಸಂಸ್ಥಾನದ ಇಳಕಲ್ಲ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಲಿಂಗಾಯತ ಮಠ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬದುಕು ಕಟ್ಟಿಕೊಂಡವರು ಸಹ ಧಾರ್ಮಿಕ ಅಂಧ ಶ್ರದ್ಧೆ ಪ್ರದರ್ಶಿಸುತ್ತಿರುವುದು ವಿಪರ್ಯಾಸ. ಲಿಂಗಾಯತರು ಲಿಂಗಾಯತ ಧರ್ಮದಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಶಿರೂರಿನ ವಿಜಯ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ವಚನಗಳನ್ನು ಭಕ್ತಿಯಿಂದ ಓದಬೇಕು. ಲಿಂಗ ಪೂಜೆಯನ್ನು ಮಾಡಬೇಕು. ಹಣೆಯಲ್ಲಿ ವಿಭೂತಿ ಧರಿಸಬೇಕು. ಮಕ್ಕಳಿಗೆ ಲಿಂಗವನ್ನು ಕಟ್ಟಬೇಕು ಎಂದು ತಿಳಿಸಿದರು.ಸಂತೆ ಕಡೂರಿನ ನವಲಿಂಗ ಸ್ವಾಮೀಜಿ ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗಾಶ್ರಮದ ಪ್ರವಚನಕಾರ ಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು. ಎಸ್.ಎನ್.ಹಾದಿಮನಿ ಮತ್ತು ಭುವನೇಶ್ವರಿ ಮೆಣಸಿನಕಾಯಿ ಪ್ರವಚನ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಲಿಂಗಸೂರನ ಸಿದ್ಧಲಿಂಗ ಸ್ವಾಮೀಜಿ, ಮನಗೂಳಿ ವಿರಕ್ತಮಠದ ವಿರತಿಶಾನಂದ ಸ್ವಾಮೀಜಿ, ಡಾವಣಗೇರಿಯ ಬಸವಚೇತನ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷ ರಾಜವ್ವ ಬದಾಮಿ ಉಪಸ್ಥಿತರಿದ್ದರು.
ಇಂದಿನ ದಿನಗಳಲ್ಲಿ ಧರ್ಮ ಪಾಲನೆ ಮಾಡುವುದನ್ನು ಲಿಂಗಾಯತರು ಮರೆತ್ತಿದ್ದಾರೆ. ಲಿಂಗಾಯತರಾದ ನಾವು ಎಷ್ಟರ ಮಟ್ಟಿಗೆ ಧರ್ಮ ಪಾಲನೆ ಮಾಡುತ್ತಿದ್ದೇವೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.
-ವಿಜಯಾನಂದ ಕಾಶಪ್ಪನವರ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರು.