ಮಕ್ಕಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಿ

KannadaprabhaNewsNetwork |  
Published : Jan 13, 2025, 12:45 AM IST
ಖಾನಾಪುರದ ಪಟ್ಟಣದ ಶಾಂತಿನಿಕೇತನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಬೆಳಗಾವಿಯ ಕಂಕನವಾಡಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾಂತೇಶ ರಾಮಣ್ಣವರ ಅವರನ್ನು ಶಾಸಕ ವಿಠ್ಠಲ ಹಲಗೇಕರ ಹಾಗೂ ಇತರರು ಸನ್ಮಾನಿಸಿದರು. | Kannada Prabha

ಸಾರಾಂಶ

ಇಂದಿನ ಜಗತ್ತಿನಲ್ಲಿ ಮೊಬೈಲ್ ಅನಿವಾರ್ಯ ವಸ್ತುವಂತಾಗಿದೆ. ಬೆಳೆಯುವ ಹಂತದಲ್ಲಿರುವ ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ನಿದ್ರಾಹೀನತೆ, ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಇಂದಿನ ಜಗತ್ತಿನಲ್ಲಿ ಮೊಬೈಲ್ ಅನಿವಾರ್ಯ ವಸ್ತುವಂತಾಗಿದೆ. ಬೆಳೆಯುವ ಹಂತದಲ್ಲಿರುವ ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ನಿದ್ರಾಹೀನತೆ, ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಕ್ಕಳು ಮೊಬೈಲ್ ದಾಸರಾಗದಂತೆ ಗಮನಹರಿಸುವ ಗುರುತರವಾದ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಬೆಳಗಾವಿಯ ಶ್ರೀ ಬಿ.ಎಂ. ಕಂಕನವಾಡಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಶರೀರ ರಚನಾ ಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ.ಮಹಾಂತೇಶ ರಾಮಣ್ಣವರ ಹೇಳಿದರು.

ಪಟ್ಟಣದ ಹೊರವಲಯದ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಈಚೆಗೆ ಜರುಗಿದ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,ಹೆಚ್ಚು ಅಂಕ ಪಡೆಯಬೇಕು, ತರಗತಿಗೆ ಪ್ರಥಮ ಬರಬೇಕೆಂದು ಪಾಲಕರು ಮಕ್ಕಳ ಬೆನ್ನು ಹತ್ತಿದ್ದು, ಆದರೆ, ಮಕ್ಕಳಲ್ಲಿ ವಿನಯತೆ, ವಿಧೇಯತೆ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ, ಭಾಷೆ, ಸಂಸ್ಕೃತಿ, ಆಚರಣೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ವಿದ್ಯೆಯಷ್ಟೇ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು, ಆರೋಗ್ಯದ ಕಾಳಜಿ ವಹಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪಕ ಹಾಗೂ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ,

ವೈದ್ಯಕೀಯ ಲೋಕದಲ್ಲಿ ವಿಶೇಷ ಸಾಧನೆ ಮಾಡಿದ ಡಾ.ರಾಮಣ್ಣವರ ಅವರು ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆ ದೇಹದಾನ, ಅಂಗಾಂಗ ದಾನ ಮತ್ತು ಚರ್ಮ ದಾನ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಅವರಿಂದ ಪ್ರೇರೇಪಿತರಾದ ಖಾನಾಪುರ ತಾಲೂಕಿನ ಹಲವು ದಾನಿಗಳು ಈಗಾಗಲೇ ದೇಹದಾನ ಮಾಡಿದ್ದಾರೆ. ಮತ್ತೆ ಹಲವರು ದೇಹದಾನದ ವಾಗ್ದಾನ ಮಾಡಿದ್ದಾರೆ ಎಂದರು.

ಸಂಸ್ಥೆಯ ಆರ್.ಎಸ್ ಪಾಟೀಲ, ಭರತ ತೋಪಿನಕಟ್ಟಿ, ಚಾಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ತುಕಾರಾಮ ಹುಂದರೆ, ಮಹಾದೇವ ಬಾಂದಿವಾಡಕರ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ಪತ್ರಕರ್ತ ಪ್ರಸನ್ನ ಕುಲಕರ್ಣಿ, ವಿವೇಕ ಕುರಗುಂದ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಭಾಗವಹಿಸಿದ್ದರು.

ಸ್ನೇಹ ಸಮ್ಮೇಳನದ ಅಂಗವಾಗಿ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮನೀಷಾ ಹಲಗೇಕರ ಕಾಯಕ್ರಮ ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ